ಹುಬ್ಬಳ್ಳಿ: ಅದು ರಾಷ್ಟ್ರಮಟ್ಟದ ಖ್ಯಾತ ಉದ್ಯಮ ಘಟಕವೊಂದಕ್ಕೆ ಮಂಜೂರು ಮಾಡಲಾದ ಜಮೀನು. ಆ ಘಟಕದ ಅಭಿವೃದ್ಧಿಯಿಂದ ವಾಣಿಜ್ಯ ಚಟುವಟಿಕೆಗಳ ಜೊತೆಗೆ ಉದ್ಯೋಗ ಕೂಡ ಸೃಷ್ಟಿಯಾಗುತ್ತವೆ ಎಂದುಕೊಂಡು ಸರ್ಕಾರ ಜಮೀನು ಕೂಡ ಮಂಜೂರು ಮಾಡಿತ್ತು. ಆದರೆ ಈಗ ಜಮೀನಿಗೆ ರಿಯಲ್ ಎಸ್ಟೇಟ್ ವಕ್ರ ದೃಷ್ಟಿ ಬಿದ್ದಿದೆ. ಇದೀಗ ಸಚಿವರೇ ಆ ಜಮೀನಿನ ಉಳಿವಿಗಾಗಿ ಹೋರಾಟ ನಡೆಸಿದ್ದಾರೆ. ಅಷ್ಟಕ್ಕೂ ಯಾವುದು ಆ ಜಮೀನು ಅಂತೀರಾ ಈ ಸ್ಟೋರಿ ನೋಡಿ..
ಹೌದು.. ಇಲ್ಲಿನ ಗೋಕುಲ ರಸ್ತೆಯಲ್ಲಿ 1965 ರಲ್ಲಿ ಕಿರ್ಲೋಸ್ಕರ್ ಕಂಪನಿ ಲಿಮಿಟೆಡ್‌ಗೆ ಸರಕಾರದಿಂದ 83 ಎಕರೆ 23 ಗುಂಟೆ ಜಾಗವನ್ನು ಕೈಗಾರಿಕಾ ಉದ್ದೇಶಕ್ಕೆ ಮಂಜೂರು ಮಾಡಲಾಗಿತ್ತು. ಅಲ್ಲದೇ ಇಲ್ಲಿ ಉದ್ಯಮ ಉತ್ಪನ್ನಗಳ ಸಂಗ್ರಹ ಹಾಗೂ ಸಿಬ್ಬಂದಿ ವಸತಿಗೆ ಅನುಮತಿ ನೀಡಿತ್ತು. ಆದರೆ ಕಂಪನಿ ಇದರಲ್ಲಿನ 20 ಎಕರೆ ಪ್ರೈಮ್ ಲೊಕೇಶನ್ ಜಾಗವನ್ನು ಭಾರೀ ಬೆಲೆಗೆ ರಾಜಕಾರಣಿಯೊಬ್ಬರ ಹತ್ತಿರದ ಸಂಬಂಧಿ ಎನ್ನಲಾದ ಖ್ಯಾತ ರಿಯಲ್ ಎಸ್ಟೇಟ್ ಕಂಪನಿಗೆ ಕಾನೂನು ಬಾಹಿರವಾಗಿ ಮಾರಾಟ ಮಾಡಲು ಯತ್ನ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ಸರಕಾರದಿಂದ ಮಂಜೂರಾದ ಜಮೀನಿನಲ್ಲಿ ಲೇಔಟ್ ಮಾಡಿ ವಸತಿ ವಿನ್ಯಾಸ ಮಾಡಲು ಯೋಜಿಸಿ ಜನರಿಗೆ ಮಾರಾಟ ಮಾಡಲು ಮುಂದಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಕುರಿತು ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರು ರಾಜ್ಯ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇನ್ನು ಈ ಕೃತ್ಯಕ್ಕೆ ಹಿಂದಿನ ಜಿಲ್ಲಾಧಿಕಾರಿ, ಪ್ರಾಧಿಕಾರದ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಅಧಿಕಾರಿಗಳು ಕಾನೂನು ಬಾಹಿರವಾಗಿ ಆದೇಶಗಳ ಮೂಲಕ ಸಹಕರಿಸಿದ್ದಾರೆಂದು ಆರೋಪಿಸಲಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಿ ಸರ್ಕಾರದ ಜಮೀನು ಸೂಕ್ತ ರೀತಿಯಲ್ಲಿ ಉಪಯೋಗವಾಗಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/06/2022 08:39 pm