ಹುಬ್ಬಳ್ಳಿ: ನಗರದ ಸಮಗ್ರ ಅಭಿವೃದ್ಧಿ ಯೋಜನೆಗೆ 2019ರಲ್ಲಿ ಅನುಮೋದನೆ ನೀಡಲಾಗಿದೆ. ಹಲವಾರು ಅಗತ್ಯ ಮಾರ್ಪಾಡುಗಳೊಂದಿಗೆ ಯೋಜನೆಯನ್ನು ಜಿ.ಐ.ಎಸ್(ಭೌಗೋಳಿಕ ಮಾಹಿತಿ ವ್ಯವಸ್ಥೆ)ಒಳಪಡಿಸಿ, ಪರಿಷ್ಕೃತ ಸಮಗ್ರ ಅಭಿವೃದ್ಧಿ ಯೋಜನೆ ಸಿದ್ದಪಡಿಸಿ ಸರ್ಕಾರದ ಅನುಮೋದನೆ ಕಳುಹಿಸಲಾಗುವುದು ಎಂದು ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ ಹೇಳಿದರು.
ನವನಗರದ ಹುಡಾ ಕಚೇರಿಯಲ್ಲಿ ಜರುಗಿದ ಮಾಸಿಕ ಸಭೆಯ ಬಳಿಕ ತಮ್ಮನ್ನು ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿದರು.
ಜಿ.ಐ.ಎಸ್ ಸರ್ವೇ ಕಾರ್ಯವನ್ನು ಖಾಸಗಿ ಕಂಪನಿಗೆ ನೀಡಿದ್ದು, ಈಗಾಗಲೇ ಸರ್ವೇ ಕಾರ್ಯ ಪ್ರಾರಂಭಿಸಿದ್ದಾರೆ.
ಯೋಜನೆಯನ್ನು ಜನಪ್ರತಿನಿಧಿಗಳು ಹಾಗೂ ನಾಗರಿಕರೊಂದಿಗೆ ಚರ್ಚಿಸಿ ಬರುವ ಮಾರ್ಚ್ ಒಳಗಾಗಿ ಸಿದ್ದಪಡಿಸಲಾಗುವುದು.
ಪ್ರಾಧಿಕಾರದಿಂದ ಅನಧಿಕೃತ ಲೇ ಔಟ್ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆ ನಿಲ್ಲವುದಿಲ್ಲ. ಇದುವರೆಗೆ 177 ಜನರಿಗೆ ಅನಧಿಕೃತ ಲೇ ಔಟ್ ಸಂಬಂಧವಾಗಿ ನೋಟಿಸ್ ನೀಡಲಾಗಿದೆ.
ಪ್ರಾಧಿಕಾರದ ಅಡಿಯಲ್ಲಿ ಲಕ್ಕಮನಹಳ್ಳಿ ವ್ಯಾಪ್ತಿಯ 62 ನಿವೇಶನಗಳಿಗಾಗಿ 328 ಅರ್ಜಿಗಳು ಸ್ವೀಕೃತವಾಗಿವೆ. ತಡಿಸಕೊಪ್ಪ ವ್ಯಾಪ್ತಿಯವ 225 ನಿವೇಶನಗಳಿಗಾಗಿ 3178 ಅರ್ಜಿಗಳು ಸ್ವೀಕೃತವಾಗಿವೆ.
ನಿವೇಶನಗಳನ್ನು ಲಾಟರಿ ಮುಖಾಂತರ ಹಂಚಿಕೆ ಮಾಡಲಾಗುವುದು. ಬಿಡಿ ಹಾಗೂ ಮೂಲೆ ನಿವೇಶನಗಳು ಸೇರಿ ಒಟ್ಟು 1300 ರಿಂದ 1400 ಸೈಟುಗಳು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇವೆ.
ಇದುವರೆಗೆ 196 ಮೂಲೆ ನಿವೇಶನಗಳನ್ನು ಪಾರದರ್ಶಕವಾಗಿ ಇ-ಹರಾಜು ಮೂಲಕ ಹಂಚಿಕೆ ಮಾಡಲಾಗಿದೆ. ಇದರಿಂದ ಪ್ರಾಧಿಕಾರಕ್ಕೆ ನೀರಿಕ್ಷೆಗಿಂತ ಹೆಚ್ಚಿನ ಲಾಭವಾಗಿದೆ ಎಂದರು.
Kshetra Samachara
14/11/2020 10:31 am