ಪಬ್ಲಿಕ್ ನೆಕ್ಸ್ಟ್ ವಿಶೇಷ : ಈರಣ್ಣ ವಾಲಿಕಾರ
ಹುಬ್ಬಳ್ಳಿ : ಅವಳಿನಗರದಲ್ಲಿಯ ಸರಕಾರಿ ಜಾಗೆ, ಸಿಎ ಸೈಟುಗಳು ಪಾಲಿಕೆ ಭ್ರಷ್ಟ ಅಧಿಕಾರಿಗಳ ಕಲ್ಪವೃಕ್ಷ ಕಾಮಧೇನು. ಅವರ ಕಣ್ಣೆದುರಿನಲ್ಲಿಯೇ ನುಂಗಣ್ಣಗಳು ಅಕ್ರಮಿಸಿಕೊಂಡರೂ ಕೇಳುವವರಿಲ್ಲ. ಅಧಿಕೃತವಾಗಿ ಕಟ್ಟಡ ನಿರ್ಮಿಸಬೇಕೆಂದರೆ ಎಂಜಿಲು ಹಣಕ್ಕೆ ಬಾಯಿ ತೆರೆದು, ತಿಂಗಳು ಗಟ್ಟಲೇ ನಾಯಿಯಂತೆ ಓಡಾಡಿಸುವ ಪಾಲಿಕೆ ಅಧಿಕಾರಿಗಳು ಪಾಲಿಕೆ ನಿವೇಶನವನ್ನೇ ನುಂಗಿ ಅಕ್ರಮ ಕಟ್ಟಡ ಕಟ್ಟುತ್ತಿದ್ದರೂ ಜಾಣ ಕುರುಡರಂತೆ ನಟಿಸುತ್ತಿದ್ದಾರಲ್ಲ ಇದಕ್ಕೇನೆನ್ನಬೇಕು?
ಹೀಗಾಗಿ ಬಡಾವಣೆಗಳಲ್ಲಿ ಶಾಲೆ, ಗಾರ್ಡನ್ ಹಾಗೂ ಇನ್ನಿತರ ಸಾರ್ವಜನಿಕ ಸೌಲಭ್ಯಗಳ (ಸಿಎ) ನಿವೇಶಗಳು ಇಂದು ಹಂತ ಹಂತವಾಗಿ ಮಾಯವಾಗ ತೊಡಗಿವೆ.
ಈಗ ಕೇಶ್ವಾಪುರದ ಪ್ರತಿಷ್ಠಿತ ನಿವೀನ್ ಪಾರ್ಕ ಪ್ರದೇಶದಲ್ಲಿ ಸಾರ್ವಜನಿಕ ಬಳಕೆಯಾಗಿ ಮೀಸಲಾಗಿರಿಸಿದ್ದ ಸುಮಾರು 50 ಗುಂಟೆ ಜಾಗೆಯಲ್ಲಿ ಭೂಪನೊಬ್ಬ ಕೋಟ್ಯಂತರ ಹಣ ಹಾಕಿ ಬೃಹತ್ ಇಂಡೋರ್ ಸ್ಟೇಡಿಯಂ ಕಟ್ಟುತ್ತಿದ್ದಾನಂತೆ. ಕೋಟಿ ಹಣ ಸುರಿದ ಮೇಲೆ ಜನರಿಂದ ಹಣ ಕೀಳಲೇಬೇಕು. ಹಾಗಾದರೆ ವಾಣಿಜ್ಯ ಬಳಕೆಗಾಗಿ ಈ ಜಾಗೆಯನ್ನು ಆತನಿಗೆ ಕೊಟ್ಟವರು ಯಾರು?
ಸ್ಟೇಡಿಯಂ ಕಟ್ಟಲು 50- 60 ಪಿಲ್ಲರ್ ನಿರ್ಮಿಸಲಾಗಿದೆ. ಶೆಡ್ ನಿರ್ಮಿಸಲು ದೊಡ್ಡ ದೊಡ್ಡ ಗರ್ಡರ್ ಸಂಗ್ರಹಿಸಲಾಗಿದೆ. ಕೇಶ್ವಾಪುರ ರಸ್ತೆ ಪಕ್ಕದಲ್ಲಿಯೇ ವಾರ್ಡ್ ನಂ 48 ರಲ್ಲಿ ಈ ನಿರ್ಮಾಣ ಕಾರ್ಯ ನಡೆದರೂ ನಿತ್ಯ ಅದೇ ದಾರಿಯಲ್ಲಿ ಓಡಾಡುವ ವಲಯ ಅಧಿಕಾರಿ ತುಬಚಿ ಎಂಬವರಿಗೆ ಗೊತ್ತೇ ಇಲ್ಲವಂತೆ. ಅವರ ಕಣ್ಣಿಗೇ ಬಿದ್ದಿಲ್ಲವಂತೆ.
ಇಲ್ಲಿ ಭಾರಿ ಭ್ರಷ್ಟಾಚಾರದ ವಾಸನೆ ಹೊಡೆಯುತ್ತಿದೆ. ಚುನಾಯಿತ ಪ್ರತಿನಿಧಿಗಳು ಇಲ್ಲದ ಕಾರನ ಪಾಲಿಕೆಯಲ್ಲಿ ಹಗಲು ದರೋಡೆ ನಡೆದಿದೆ ಎಂದು ಸಾರ್ವಜನಿಕರು ಬಹಿರಂಗವಾಗಿ ಆರೋಪಿಸುತ್ತಿದ್ದಾರೆ. ನವೀನ್ ಪಾರ್ಕದಲ್ಲಿ ನಡೆಯುತ್ತಿರುವ ಭೂಗಳ್ಳತನದಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಬಗ್ಗೆ ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರ ಪುತ್ರ ಹಾಗೂ ಆಕ್ಸಫರ್ಡ ಸಂಸ್ಥೆ ಮುಖ್ಯಸ್ಥ ವಸಂತ ಹೊರಟ್ಟಿ ಹಾಗೂ ಇತರ ಗಣ್ಯರು ಸಮರ ಸಾರಿದ್ದಾರೆ.
ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರಿಗೆ ದೂರು ನೀಡಿದ್ದು, ಅವರು ತಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
Kshetra Samachara
10/11/2020 06:31 pm