ಧಾರವಾಡ: ಕಲಘಟಗಿ ಕ್ಷೇತ್ರದ ಟಿಕೆಟ್ ಸಿಕ್ಕೇ ಬಿಟ್ಟಿತು ಎಂಬ ಉಮೇದಿಯಲ್ಲಿರುವ ಮಾಜಿ ಶಾಸಕ, ಸಚಿವ ಸಂತೋಷ್ ಲಾಡ್ ಅಂಬ್ಯುಲೆನ್ಸ್ ಸೇವೆಯ ಹೆಸರಲ್ಲಿ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ.
ಚುನಾವಣಾ ಪ್ರಚಾರಕ್ಕಾಗಿ ಮಾಡುತ್ತಿದ್ದರೂ, ಗ್ರಾಮೀಣ ಜನತೆಗೆ ತುರ್ತು ಸಂದರ್ಭದಲ್ಲಿ ವೈದ್ಯಕೀಯ ಸಹಾಯ ದೊರೆಯಲಿ ಎಂಬ ಅವರ ಉದ್ದೇಶ ಒಳ್ಳೆಯದೇ. ಆದರೆ ತಜ್ಞ ವೈದ್ಯಕೀಯ ಸಿಬ್ಬಂದಿ ಇಲ್ಲದೆ ಅಂಬ್ಯುಲೆನ್ಸ್ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡುವುದು ಎಷ್ಟು ಅಪಾಯಕಾರಿ ಎಂಬುದು ಅವರ ಅರಿವಿಗೆ ಬಂದಂತಿಲ್ಲ.
ಸಂತೋಷ್ ಲಾಡ್ ಹಾಗೂ ಅವರ ಹಿಂಬಾಲಕರು ಅಂಬ್ಯುಲೆನ್ಸ್ ಮೂಲಕ ನೀಡಿದ ಚಿಕಿತ್ಸೆಯಿಂದಾಗಿ ಓರ್ವ ವ್ಯಕ್ತಿಗೆ ರಿಯಾಕ್ಷನ್ ಆಗಿ ಜಿಲ್ಲಾಸ್ಪತ್ರೆ ದಾಖಲಾಗುವಂತಾಗಿತ್ತು.
ಕಲಘಟಗಿ ತಾಲೂಕಿನ ಪ್ರತಿ ನಾಲ್ಕು ಗ್ರಾಮ ಪಂಚಾಯ್ತಿ ಸೇರಿದಂತೆ ಒಂದು ಅಂಬ್ಯುಲೆನ್ಸ್ ನ್ನು ಲಾಡ್ ಅವರು ನೀಡಿದ್ದಾರೆ. ಈ ಅಂಬ್ಯುಲೆನ್ಸ್ ಮೂಲಕ ನಿಗದಿ ಗ್ರಾಮದ ಶಿವಾನಂದ ಬೆಳ್ಳಿಗಟ್ಟಿ ಎಂಬಾತ ಮಾತ್ರೆಗಳನ್ನು ಪಡೆದಿದ್ದ. ಅದಾದ ಬಳಿಕ ಶಿವಾನಂದನಿಗೆ ರಿಯಾಕ್ಷನ್ ಆಗಿ ದೇಹದ ಮೇಲೆ ಬೊಬ್ಬೆಗಳು( ದೊಡ್ಡ ಗುಳ್ಳೆಗಳು)ಕಾಣಿಸಿಕೊಳ್ಳ ತೊಡಗಿದವು. ಇದರಿಂದ ಗಾಬರಿಗೊಂಡ ಶಿವಾನಂದ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆದುಕೊಂಡಿದ್ದಾನೆ.
ಯಾರೇ ಖಾಸಗಿ ಅಂಬ್ಯುಲೆನ್ಸ್ ಓಡಿಸಬೇಕಾದರೂ ಜಿಲ್ಲಾ ವೈದ್ಯಾಧಿಕಾರಿ ಅನುಮತಿ ಪಡೆಯಬೇಕು, ಕನಿಷ್ಟ ನುರಿತ ಅರೆ ವೈದ್ಯಕೀಯ ಸಿಬ್ಬಂದಿ ಹೊಂದಿರಬೇಕು. ಆದರೆ ಲಾಡ್ ಅಂಬ್ಯುಲೆನ್ಸ್ ಇದಾವುದನ್ನೂ ಹೊಂದಿಲ್ಲ. ಸರಕಾರಿ ನಿಯಮಗಳನ್ನು ಪಾಲಿಸದೆ ಅಂಬ್ಯುಲೆನ್ಸ್ ಮೂಲಕ ಚಿಕಿತ್ಸೆ ಕೊಡಿಸುವಾಗ ಯಾರದಾದರೂ ಜೀವಕ್ಕೆ ಅಪಾಯವಾದರೆ ಯಾರು ಹೊಣೆ? ಇದನ್ನು ಸಂತೋಷ್ ಲಾಡ್ ಅರ್ಥ ಮಾಡಿಕೊಳ್ಳಬೇಕು.
ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋ ಹಾಗೆ ಸೋತ ಮೇಲೆ ಲಾಡ್ ಸಾಹೇಬರಿಗೆ ಕ್ಷೇತ್ರದ ಜನರ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿದೆ. ಈ ಅಂಬ್ಯುಲೆನ್ಸ್ ನಿಂದಾದ ಅವಾಂತರವನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಯಾವ ರೀತಿ ಪರಿಗಣಿಸುತ್ತದೆ ನೋಡಬೇಕು.
Kshetra Samachara
02/12/2021 10:34 am