ಹುಬ್ಬಳ್ಳಿ: ಹನ್ನೆರಡು ಲಕ್ಷ ಅವಳಿನಗರ ನಾಗರಿಕರ ಬಹುದಿನಗಳ ನಿರೀಕ್ಷೆಗೆ ಹಾಗೂ ಬೇಡಿಕೆಗೆ ಸ್ಪಂದಿಸಿ ಇದೇ 26ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವಳಿನಗರಕ್ಕೆ ಆಗಮಿಸುತ್ತಿದ್ದಾರೆ. ಈಗಾಗಲೇ ಎಲ್ಲ ರೀತಿಯಲ್ಲಿ ಸಿದ್ಧತೆ ಮಾಡಲಾಗಿದ್ದು, ಗಣ್ಯರಿಗೆ ವಿಶೇಷ ಆಮಂತ್ರಣ ನೀಡುವ ಮೂಲಕ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದೇವೆ ಎಂದು ಹು-ಧಾ ಮಹಾನಗರ ಪಾಲಿಕೆ ಮಹಾಪೌರ ಈರೇಶ ಅಂಚಟಗೇರಿ ಹೇಳಿದರು.
ನಗರದಲ್ಲಿಂದು ಸಿದ್ಧತೆ ವೀಕ್ಷಣೆ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರಾಷ್ಟ್ರಪತಿಗಳಿಗೆ ಪೌರಸನ್ಮಾನ ಮಾಡುವ ಬಗ್ಗೆ ಬೇಡಿಕೆ ಇಟ್ಟಿದ್ದೆವು. ಮನವಿಗೆ ಸ್ಪಂದಿಸಿದ ರಾಷ್ಟ್ರಪತಿ ಅವರು ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಬಹುತೇಕ ನಾಯಕರಿಗೆ ಆಹ್ವಾನ ನೀಡಲಾಗಿದೆ ಎಂದರು.
ರಾಷ್ಟ್ರಪತಿಗಳ ಮೈಸೂರು ಕಾರ್ಯಕ್ರಮ ಹಿನ್ನೆಲೆಯಲ್ಲಿ ಅಲ್ಲಿ ನಡೆಯುತ್ತಿರುವ ಸಿದ್ದತೆಯಂತೆ ಹುಬ್ಬಳ್ಳಿ ಕಾರ್ಯಕ್ರಮದಲ್ಲೂ ಮಾಡಲಾಗುತ್ತಿದೆ. ಅಲ್ಲಿನ ಕಮಿಷನರ್ ಹಾಗೂ ನಮ್ಮ ಕಮಿಷನರ್ ಕಾರ್ಯಕ್ರಮ ಸಿದ್ಧತೆ ಕಾಮಗಾರಿ ಬಗ್ಗೆ ಚರ್ಚಿಸಿದ್ದಾರೆ ಎಂದರು.
ಇನ್ನೂ ರಾಷ್ಟ್ರಪತಿಗೆ ಸನ್ಮಾನಿಸುವ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಉಸ್ತುವಾರಿ ಸಚಿವರು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ ಶಾಸಕರು, ಜನಪ್ರತಿನಿಧಿಗಳು, ಪಾಲಿಕೆ ಸದಸ್ಯರು, ಮಾಜಿ ಪಾಲಿಕೆ ಸದಸ್ಯರು ಸೇರಿದಂತೆ ಮುಂತಾದ ಗಣ್ಯಮಾನ್ಯರಿಗೆ ಆಹ್ವಾನ ನೀಡಲಾಗಿದೆ. ಈಗಾಗಲೇ 5000 ಆಮಂತ್ರಣ ಪತ್ರಿಕೆಗಳನ್ನು ತಲುಪಿಸುವ ಕೆಲಸ ಆಗಿದೆ. ರಾಷ್ಟ್ರಪತಿಗೆ ಸಿದ್ಧಾರೂಢರ ಬೆಳ್ಳಿ ಪ್ರತಿಮೆ, ಪುಸ್ತಕ, ಧಾರವಾಡ ಫೇಡಾ ನೆನಪಿನ ಕಾಣಿಕೆಯಾಗಿ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.
Kshetra Samachara
24/09/2022 09:28 pm