ಧಾರವಾಡ: ಬಿಜೆಪಿ ಸರ್ಕಾರ ಮಂಚದ ಸರ್ಕಾರ ಎನ್ನುವ ಪ್ರಿಯಾಂಕ ಖರ್ಗೆ ಅವರ ಹೇಳಿಕೆಯನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ನಮ್ಮ ದೇಶಕ್ಕೆ ಒಂದು ಸಂಸ್ಕೃತಿ ಇದೆ. ಅಕ್ಕ, ತಂಗಿ ಹಾಗೂ ತಾಯಂದಿರ ಬಗ್ಗೆ ಶ್ರದ್ಧೆ ಇರುವ ದೇಶ ನಮ್ಮದು. ಇಂತಹ ದೇಶದಲ್ಲಿ ಪ್ರಿಯಾಂಕ ಖರ್ಗೆ ಈ ರೀತಿಯ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಅತ್ಯಂತ ಖಂಡನೀಯ. ಅವರು ಕ್ಷಮೆಯಾಚಿಸಿ ಕೂಡಲೇ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಮೊದಲನೆಯದಾಗಿ ಖರ್ಗೆ ಅವರು ಲಂಚದ ಬಗ್ಗೆ ಮಾತನಾಡಿದ್ದಾರೆ. ಲಂಚ ಎಂಬ ಮೊಟ್ಟೆಯನ್ನು ಇಟ್ಟು, ಅದಕ್ಕೆ ಕಾವು ಕೊಟ್ಟು ಮರಿ ಮಾಡಿದವರೇ ಕಾಂಗ್ರೆಸ್‌ನವರು. ಇಂತವರು ಲಂಚದ ಬಗ್ಗೆ ಮಾತನಾಡುತ್ತಿದ್ದಾರೆ. ಇವರ ಅವಧಿಯಲ್ಲಿ 10 ವರ್ಷ ಭಾರತದ ಪರಿಸ್ಥಿತಿ ಏನಾಗಿತ್ತು ಎಂಬುದು ಜನರಿಗೆ ಗೊತ್ತಿದೆ. 2 ಜಿ ಸ್ಪೆಕ್ಟ್ರಂ ಹಗರಣ, ಕಾಮನ್ ವೆಲ್ತ್ ಹಗರಣ, ಕೋಲ್ ಸ್ಕ್ಯಾಮ್ ಹೀಗೆ ಹಲವಾರು ಹಗರಣಗಳು ಇವರ ಕಾಲದಲ್ಲಿ ನಡೆದಿವೆ. ಭಾರತ ದೇಶಕ್ಕೆ ಬರಲು ಜನರ ಬಳಿ ಇವರು ವೀಸಾಕ್ಕೂ ಹಣ ಪಡೆದಿದ್ದಾರೆ. ಇಂತಹ ಅಯೋಗ್ಯ ಪಾರ್ಟಿ ಈ ಕಾಂಗ್ರೆಸ್. ಆದ್ದರಿಂದ ಪ್ರಿಯಾಂಕ ಖರ್ಗೆ ಕೂಡಲೇ ಕ್ಷಮೆ ಕೇಳಬೇಕು ಎಂದರು.
ಪರೇಶ ಮೇಸ್ತಾ ಹತ್ಯೆ ಪ್ರಕರಣದ ಆರೋಪಿಯನ್ನು ವಕ್ಫ್ ಬೋರ್ಡ್‌ಗೆ ನೇಮಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಆ ಹೆಸರು ಹೇಗೆ ಬಂತು ಎನ್ನುವುದರ ಬಗ್ಗೆ ಪರಿಶೀಲಿಸಿ ಸಂಬಂಧಿಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಹೇಳಿದ್ದೇವೆ. ಇದು ಅತ್ಯಂತ ಬೇಜವಾಬ್ದಾರಿ ಕೆಲಸ. ಆತ ಇನ್ನೂ ಆರೋಪಿ ಇದ್ದಾನೆ. ಹೀಗಾಗಿ ಆತನ ಹೆಸರು ಬಂದಿದ್ದು ಸರಿಯಲ್ಲ. ನಾನು ಸಚಿವೆ ಶಶಿಕಲಾ ಜೊಲ್ಲೆ ಅವರ ಜತೆಗೂ ಮಾತನಾಡಿದ್ದು, ಇದರ ಬಗ್ಗೆ ಪರಿಶೀಲನೆ ಮಾಡಿ ನನಗೂ ಮತ್ತು ಪಕ್ಷಕ್ಕೆ ವಿವರಣೆ ನೀಡಬೇಕು ಎಂದು ಹೇಳಿದ್ದೇನೆ ಎಂದರು.
Kshetra Samachara
13/08/2022 02:47 pm