ಧಾರವಾಡ: ಧಾರವಾಡದ ಕೆಸಿಡಿ ಕಾಲೇಜಿನ ಬಿಬಿಎ ಸಭಾಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಛಾಯಾಚಿತ್ರ ಪ್ರದರ್ಶನದಲ್ಲಿ ಕಾಂಗ್ರೆಸ್ ಪಕ್ಷದ ಹಿಂದಿನ ಯಾವುದೇ ಪ್ರಧಾನಮಂತ್ರಿಗಳ ಭಾವಚಿತ್ರ ಹಾಕದೇ ಇರುವುದಕ್ಕೆ ಆಕ್ರೋಶಗೊಂಡ ಕಾಂಗ್ರೆಸ್ ಮುಖಂಡರು, ಮಾಜಿ ಮೇಯರ್ ದೀಪಕ ಚಿಂಚೋರೆ ನೇತೃತ್ವದಲ್ಲಿ ಸಭಾಭವನದ ಮುಂದೆ ಪ್ರತಿಭಟನೆ ನಡೆಸಿದರು.
ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಛಾಯಾಚಿತ್ರ ಪ್ರದರ್ಶನವಾಗಿದ್ದು, ಇದರಲ್ಲಿ ಕಾಂಗ್ರೆಸ್‌ನ ಯಾವೊಬ್ಬ ಹಿಂದಿನ ಪ್ರಧಾನಮಂತ್ರಿಗಳ ಭಾವಚಿತ್ರ ಹಾಕಿಲ್ಲ. ಕರ್ನಾಟಕದಿಂದ ಪ್ರಧಾನಿಯಾಗಿದ್ದ ದೇವೇಗೌಡರ ಬಗ್ಗೆ ಮಾಹಿತಿ ಇಲ್ಲ. ಕೇವಲ ಮೋದಿ ಭಾವಚಿತ್ರ ಮಾತ್ರ ಹಾಕಿ ಪ್ರಚಾರ ತೆಗೆದುಕೊಳ್ಳಲಾಗುತ್ತಿದೆ. ಈ ಪ್ರದರ್ಶನವನ್ನು ಕೂಡಲೇ ಬಂದ್ ಮಾಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ದೀಪಕ ಚಿಂಚೋರೆ, ಸದಾನಂದ ಡಂಗನವರ, ರಾಬರ್ಟ್ ದದ್ದಾಪುರಿ, ಆನಂದ ಜಾಧವ ಸೇರಿದಂತೆ ಕಾಂಗ್ರೆಸ್‌ನ ಅನೇಕ ಮುಖಂಡರನ್ನು ಬಂಧಿಸಿ ಕರೆದೊಯ್ದು ನಂತರ ಬಿಡುಗಡೆಗೊಳಿಸಿದರು. ಪೊಲೀಸರ ಈ ವರ್ತನೆ ಹಾಗೂ ಸರ್ಕಾರದ ಈ ಕ್ರಮವನ್ನು ದೀಪಕ ಚಿಂಚೋರೆ ಖಂಡಿಸಿದರು.
ಈ ಛಾಯಾಚಿತ್ರ ಪ್ರದರ್ಶನದಲ್ಲಿ ಎಲ್ಲಾ ಪ್ರಧಾನಿಗಳ ಫೋಟೋ ಇರಬೇಕಿತ್ತು. ಆದರೆ, ಬಿಜೆಪಿ ಮೋದಿ ಅವರ ಭಾವಚಿತ್ರವನ್ನಷ್ಟೇ ಹಾಕಿ ಹಿಂದಿನ ಪ್ರಧಾನಿಗಳಿಗೆ ಅವಮಾನ ಮಾಡಿದೆ. ಕೂಡಲೇ ಈ ಪ್ರದರ್ಶನವನ್ನು ಬಂದ್ ಮಾಡಬೇಕು ನಾಳೆಯೂ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ದೀಪಕ ಚಿಂಚೋರೆ ಎಚ್ಚರಿಸಿದರು.
Kshetra Samachara
26/07/2022 05:09 pm