ಹುಬ್ಬಳ್ಳಿ: ಅದು ರಾಜ್ಯದ ಎರಡನೇ ಅತೀ ದೊಡ್ಡ ಮಹಾನಗರ ಪಾಲಿಕೆ. ಆದ್ರೆ ಈ ಪಾಲಿಕೆಗೆ ಮೇಯರ್, ಉಮೇಯರ್ ಆಯ್ಕೆಗೆ ಕಗ್ಗಂಟಾಗಿತ್ತು. ಆದ್ರೆ ಈಗ ಮೇ 28ಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್ ಹಾಗೂ ಉಪ ಮೇಯರ್ ಆಯ್ಕೆ ಚುನಾವಣೆಗೆ ದಿನ ನಿಗದಿಯಾಗಿದೆ. ಆದರೆ, ಚುನಾವಣೆ ನಡೆಸಲು ಸ್ಥಳ ಯಾವುದು ಎಂಬುದು ನಿರ್ಧಾರವಾಗಿಲ್ಲ.
ರಾಜ್ಯದ ಎರಡನೆಯ ಮಹಾನಗರ ಪಾಲಿಕೆ ಎಂಬ ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಗೆ 38 ತಿಂಗಳ ಬಳಿಕ ಜನಪ್ರತಿನಿಧಿಗಳ ಆಗಮನವಾಗುತ್ತಿದೆ. ಬಿಜೆಪಿ 39, ಕಾಂಗ್ರೆಸ್ 33, ಪಕ್ಷೇತರರು 6, ಎಐಎಂಐಎಂ 3, ಜೆಡಿಎಸ್ 1 ಸ್ಥಾನಗಳಲ್ಲಿ ಜಯ ಗಳಿಸಿದ್ದು ಇವರಿಗೆಲ್ಲ ಪ್ರತ್ಯೇಕವಾಗಿ ಆಸನ ವ್ಯವಸ್ಥೆ ಕಲ್ಪಿಸುವುದು ಈಗ ಸವಾಲಿನ ಕೆಲಸವಾಗಿದೆ. ಸದ್ಯ ಈಗ ಇರುವ ಕೇಂದ್ರ ಕಚೇರಿಯ ಸಭಾಭವನದಲ್ಲಿ ಇಷ್ಟೊಂದು ಸದಸ್ಯರಿಗೆ ಸ್ಥಳವನ್ನು ಕಲ್ಪಿಸುವದು ಸಾಧ್ಯವಿಲ್ಲ. ಮೇಯರ್-ಉಪ ಮೇಯರ್ ಆಯ್ಕೆ ವೇಳೆ ಮತಾಧಿಕಾರವಿರುವ ಸಂಸದರು, ಶಾಸಕರು ಭಾಗಿಯಾಗಿರುವ ಕಾರಣ ಬೇರೆ ಸ್ಥಳ ಹುಡುಕುವದು ಅನಿವಾರ್ಯವಾಗಿದೆ.
ಹುಬ್ಬಳ್ಳಿಯಲ್ಲಿರುವ ಪಾಲಿಕೆಯ ಕೇಂದ್ರ ಕಚೇರಿಯ ಸಭಾಭವನ ಹಾಗೂ ಆದರ್ಶನಗರದಲ್ಲಿರುವ ಕನ್ನಡ ಭವನ ಎಂಬ ಎರಡು ಆಯ್ಕೆಗಳಿವೆ. ಈ ಬಾರಿ ಪಾಲಿಕೆ ಸದಸ್ಯರ ಸಂಖ್ಯೆ 67ರಿಂದ 82ಕ್ಕೆ ಏರಿಕೆಯಾಗಿರುವುದರಿಂದ ಸ್ಥಳ ಆಯ್ಕೆ ಕಸರತ್ತು ಮುಂದುವರಿದಿದೆ. 2021ರ ಸೆಪ್ಟೆಂಬರ್ 6ರಂದು ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರದಿಂದ ಹುಡುಕಾಟ ನಡೆದಿದೆ. ಮೇ 28ರಂದು ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆ ನಡೆಯಲಿದೆ.
ಹಾಲಿ ಸಭಾಭವನದಲ್ಲಿ 76 ಜನ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇದೆ. ಅದು ಸಹ ತುಂಬಾ ಇಕ್ಕಟ್ಟಾಗಿದೆ. 'ಮೇಯರ್-ಉಪ ಮೇಯರ್' ಆಯ್ಕೆ ಚುನಾವಣೆಯನ್ನು ನಡೆಸೋದು ಈ ಹಿಂದೆಲ್ಲ ನಡೆದಂತೆ ಇಕ್ಕಟ್ಟಾಗಿರುವ ಪಾಲಿಕೆಯ ಕೇಂದ್ರ ಕಚೇರಿ ಸಭಾಭವನದಲ್ಲೋ ಅಥವಾ ವ್ಯವಸ್ಥಿತವಾಗಿರದಿದ್ದರೂ ಸಾಕಷ್ಟು ವಿಸ್ತಾರವಾಗಿರುವ ಕನ್ನಡ ಭವನದಲ್ಲೋ ಎಂಬುದನ್ನು ಅಧಿಕಾರಿಗಳು ನಿರ್ಧರಿಸಬೇಕಿದೆ.
ಈ ಬಗ್ಗೆ ಹು-ಧಾ ಪಾಲಿಕರ ಆಯುಕ್ತ ಡಾ.ಬಿ ಗೋಪಾಲಕೃಷ್ಣ ಮಾಹಿತಿ ನೀಡಿದ್ದು, ಕನ್ನಡ ಭವನ ಅಥವಾ ಪಾಲಿಕೆಯ ಸಭಾಭವನ ಇವೆರಡರಲ್ಲಿ ಒಂದು ಕಡೆ ಹು-ಧಾ ಮಹಾನಗರ ಪಾಲಿಕೆ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆ ನಡೆಯಲಿದೆ. ಈ ಕುರಿತು ಪಾಲಿಕೆಯ ಆಡಳಿತಾಧಿಕಾರಿಯಾದ ಬೆಳಗಾವಿ ಪ್ರಾದೇಶಿಕ ಆಯುಕ್ತರೊಂದಿಗೆ ಮೇ 16ರಂದು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
Kshetra Samachara
14/05/2022 07:33 pm