ಧಾರವಾಡ: ವಿಧಾನ ಪರಿಷತ್‌ನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸರ್ಕಾರ ಗುರುವಾರ ಅಧಿಸೂಚನೆ ಹೊರಡಿಸಿದೆ. ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ.19 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆಗಲಿದೆ. ಮೇ.26ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ ಎಂದರು. ಮೇ.27 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಮೇ.30 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ. ಜೂನ್.13 ರಂದು ಬೆಳಿಗ್ಗೆ 8 ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಜೂನ್.15 ರಂದು ಮತ ಎಣಿಕೆ ನಡೆಯಲಿದೆ ಎಂದರು.
ಧಾರವಾಡ, ಉತ್ತರ ಕನ್ನಡ, ಗದಗ, ಹಾವೇರಿ ಜಿಲ್ಲೆಗಳನ್ನೊಳಗೊಂಡು ಈ ಚುನಾವಣೆ ನಡೆಯಲಿದೆ. ಧಾರವಾಡ ಜಿಲ್ಲೆಯಲ್ಲಿ 3162 ಪುರುಷ, 2727 ಮಹಿಳೆಯರ ಸೇರಿದಂತೆ 5889 ಮತದಾರರಿದ್ದಾರೆ. ಜಿಲ್ಲೆಯಲ್ಲಿ 21 ಮತಗಟ್ಟೆಗಳನ್ನು ತೆರೆಯಲಾಗುವುದು. ಚುನಾವಣಾ ನೀತಿ ಸಂಹಿತೆ ಈಗಾಗಲೇ ಜಾರಿಯಲ್ಲಿರುವ ಕಾಮಗಾರಿ, ಯೋಜನೆಗಳಿಗೆ ಅನ್ವಯಿಸುವುದಿಲ್ಲ. ಹೊಸ ಕಾಮಗಾರಿಗಳಿಗೆ ಇದು ಅನ್ವಯವಾಗಲಿದೆ. ನಾಮಪತ್ರ ಸಲ್ಲಿಕೆ ಮತ್ತು ಮತ ಎಣಿಕೆಯನ್ನು ಬೆಳಗಾವಿಯ ಪ್ರಾದೇಶಿಕ ಆಯುಕ್ತರು ಶೀಘ್ರವೇ ನಿರ್ಧರಿಸಲಿದ್ದಾರೆ ಎಂದರು.
ಮತದಾರ ಪಟ್ಟಿಯಲ್ಲಿ ಕಂಡು ಬಂದ ದೋಷಗಳನ್ನು ಈಗಾಗಲೇ ಸರಿಪಡಿಸಲಾಗಿದ್ದು, ವಯಸ್ಸಿನ ವ್ಯತ್ಯಾಸದಲ್ಲಿ ಕಂಡು ಬಂದ ಒಂದು ಪ್ರಕರಣವನ್ನು ಈಗಾಗಲೇ ರದ್ದುಪಡಿಸಲಾಗಿದೆ ಎಂದರು.
Kshetra Samachara
12/05/2022 10:12 pm