ಹುಬ್ಬಳ್ಳಿ: ಕೊರೊನಾ ಲಾಕ್‌ಡೌನ್‌ನಿಂದಾಗಿ ಸಾರಿಗೆ ಇಲಾಖೆಯ ನಾಲ್ಕು ವಿಭಾಗದಿಂದ 3,700 ಕೋಟಿ ನಷ್ಟ ಸಂಭವಿಸಿದೆ. ಇಂತಹ ಸಂದರ್ಭದಲ್ಲಿ ಸಂಸ್ಥೆಯ 1.30 ಲಕ್ಷ ನೌಕರಿಗೆ ತೊಂದರೆಯಾಗಬಾರದು ಎಂದು ರಾಜ್ಯ ಸರ್ಕಾರದಿಂದ ಸಾರಿಗೆ ನೌಕರರ ಸಂಬಳ ಭರಣೆಗೆ 1,746 ಕೋಟಿ ನೆರವು ನೀಡಲಾಗಿದೆ. ನೌಕರರ ಒಂಬತ್ತು ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ಕಲಘಟಗಿ ನೂತನ ಬಸ್ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಾರಿಗೆ ಸಚಿವನಾಗಿ ಅಧಿಕಾರಿ ಸ್ವೀಕರಿಸಿದ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಯ ನಷ್ಟದ ಪ್ರಮಾಣ 3,000 ಕೋಟಿ ರೂ. ಇತ್ತು. ಸರ್ಕಾರದಿಂದ 2,980 ಕೋಟಿ ಬರುವುದು ಬಾಕಿ ಇತ್ತು. ಇದರೊಂದಿಗೆ ಅನಿರೀಕ್ಷಿತ ಕೊರೊನಾ ಲಾಕ್‌ಡೌನ್ ನಿಂದಾಗಿ ನಷ್ಟದ ಪ್ರಮಾಣ ಹೆಚ್ಚಾಗಿದೆ. ಲಾಕ್‌ಡೌನ್ ನಂತರ ಸಾರಿಗೆ ಸಂಚಾರ ಪುನಃ ಪ್ರಾರಂಭಿಸಲಾಗಿದೆ. ಪ್ರತಿದಿನ 1 ಕೋಟಿ ಜನರು ಪ್ರಯಾಣಿಸುತ್ತಿದ್ದಾರೆ. ಲಾಕ್‌ಡೌನ್ ಪ್ರಾರಂಭಕ್ಕೂ ಮುನ್ನ 4.20 ಕೋಟಿ ಜನರು ಪ್ರಯಾಣಿಸುತ್ತಿದ್ದರು. ಪ್ರಯಾಣಿಕರ ಸಂಖ್ಯೆ ಇಳೆಯಿಂದಾಗಿ ಸಾರಿಗೆ ಆದಾಯ ಕುಂಠಿತವಾಗಿದೆ. ಇಲಾಖೆಯಲ್ಲಿ ಪಾರದರ್ಶಕ ಆಡಳಿತ ವ್ಯವಸ್ಥೆ ತರಲಾಗುವುದು. ಕೇಂದ್ರ ಸರ್ಕಾರ 350 ಎಲೆಕ್ಟ್ರಿಕಲ್ ಬಸ್ ಖರೀದಿಗೆ ಅನುಮೋದಿಸಿ, ಪ್ರತಿ ಬಸ್‌ಗೆ 55 ಲಕ್ಷ ರೂಪಾಯಿ ಸಬ್ಸಿಡಿ ನೀಡಿದೆ. ಬಸ್ ಖರೀದಿ ಪ್ರಕ್ರಿಯೆ ಚಾಲನೆಯಲ್ಲಿದೆ. ಬೆಂಗಳೂರಿಗೆ 300 ಹಾಗೂ ಹುಬ್ಬಳ್ಳಿ ಧಾರವಾಡ ನಗರಕ್ಕೆ 50 ಎಲೆಕ್ಟ್ರಿಕಲ್ ಬಸ್‌ಗಳನ್ನು ನೀಡಲಾಗುವುದು. ಸಂಸ್ಥೆಯ 2,000 ಬಸ್‌ಗಳು 9 ಲಕ್ಷಕ್ಕೂ ಹೆಚ್ಚು ದೂರ ಕ್ರಮಿಸಿದ್ದು, ಅವುಗಳನ್ನು ನಿಷ್ಕ್ರಿಯ ಗೊಳಿಸಲಾಗುವುದು. ಹಳೆ ಬಸ್‌ಗಳನ್ನು ಗುಜರಿಯವರಿಗೆ ಹರಾಜು ನೀಡದೆ. ಸಾರ್ವಜನಿಕ ಸ್ಥಳಗಳಲ್ಲಿ ಬಸ್‌ಗಳನ್ನು ಬಳಸಿ ಸುಸಜ್ಜಿತ ಶೌಚಾಲಯ, ಸ್ನಾನ ಗೃಹಗಳನ್ನು ನಿರ್ಮಿಸಲಾಗುವುದು. ಇದರಿಂದ ಹಣದ ಉಳಿತಾಯವಾಗಲಿದೆ. ಶಾಸಕರು ಇಂತಹ ಶೌಚಾಲಯ ನಿರ್ಮಾಣಕ್ಕೆ ಅನುದಾನದಿಂದ ಹೆಚ್ಚಿನ ಹಣ ನೀಡಬೇಕು. ನೌಕರರು ಯಾರೋದೋ ಮಾತು ಕೇಳಿ ಪ್ರತಿಭಟನೆಗೆ ಇಳಿಯಬಾರದು. ಇಲಾಖೆ ಕಾರ್ಮಿಕರ ಹಿತರಕ್ಷಣೆಗೆ ಬದ್ಧವಾಗಿದೆ. ಅಧಿಕಾರಿಗಳಿಂದ ಕೆಳ ಹಂತದ ನೌಕರರಿಗೆ ಉಂಟಾಗುವ ಕಿರುಕುಳ ತಪ್ಪಿಸಬೇಕು. ವರ್ಗಾವಣೆ ನಿಯಮಗಳನ್ನು ಬದಲಿಸಲಾಗುವುದು. ವಾ.ಕ.ರ.ಸಾ.ಸಂಸ್ಥೆ ನಿವೃತ್ತಿ ನೌಕರರ ಉಪದಾನ ನಗದೀಕರಣ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡಲು ಅಲ್ಪಾವಧಿ ಸಾಲ ಪಡೆಯುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ಸಚಿವರು ಸೂಚಿಸಿದರು.
ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಅಂತರ ನಿಗಮ ವರ್ಗಾವಣೆ ಬಗ್ಗೆ ಸರಳ ನಿಯಮ ರೂಪಿಸಬೇಕು. ಪತಿ ಪತ್ನಿ ಪ್ರಕರಣಗಳಲ್ಲಿ ಆದ್ಯತೆ ಮೇರೆಗೆ ವರ್ಗಾವಣೆ ಮಾಡಬೇಕು. ಕಾರ್ಮಿಕರ ಸಂತೋಷ ಮಟ್ಟ ಹೆಚ್ಚಾದರೆ ಸಾರಿಗೆ ಸಂಸ್ಥೆಗಳು ಸಮೃದ್ಧವಾಗುತ್ತವೆ. ದೇಶದಲ್ಲಿ ಅಪಘಾತಗಳಿಂದ ಮೃತರಾಗುವವರ ಸಂಖ್ಯೆ ಹೆಚ್ಚಿದೆ. ಇದು ಕಡಿಮೆಯಾಗಬೇಕು. ಸುರಕ್ಷಿತ ಪ್ರಯಾಣ ಕೇಂದ್ರ ಸರ್ಕಾರದ ಗುರಿಯಾಗಿದೆ. ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆಯಡಿ 80 ಸಾವಿರ ಕೋಟಿ ರೂಪಾಯಿಗಳ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ 1.25 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ರಾಜ್ಯಕ್ಕೆ ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಇದರಲ್ಲಿ 3,200 ಕಿ.ಮೀ.ಗ್ರಾಮೀಣ ರಸ್ತೆ ನಿರ್ಮಿಸಲಾಗುವುದು. ಕಲಘಟಗಿ ನಗರದಲ್ಲಿ ಕ್ರೀಡಾ ಸಮುಚ್ಚಯ ನಿರ್ಮಾಣಕ್ಕಾಗಿ ಎನ್.ಪಿ.ಸಿ.ಐ.ಎಲ್ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ 5 ಕೋಟಿ ರುಪಾಯಿಗಳನ್ನು ಮಂಜೂರು ಮಾಡಲಾಗಿದೆ. ಓ.ಎನ್.ಜಿ.ಸಿ. ವತಿಯಿಂದ ಕಲಘಟಗಿ ತಾಲೂಕಿನ ಸರ್ಕಾರಿ ಶಾಲೆಗಳಿಗೆ 4,000 ಡೆಸ್ಕ್ ನೀಡಲಾಗಿದೆ ಎಂದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಮಾತನಾಡಿ, ಅವಳಿ ನಗರದಲ್ಲಿ ಬೇಂದ್ರೆ ಬಸ್ ಗಳ ಹಾವಳಿ ಹೆಚ್ಚಾಗಿರುವುದರಿಂದ ಸಾರಿಗೆ ಸಂಸ್ಥೆಗೆ ಪ್ರತಿ ತಿಂಗಳು 20 ಕೋಟಿ ರೂ. ನಷ್ಟವಾಗುತ್ತಿದೆ. ಬಿ.ಆರ್.ಟಿ.ಎಸ್. ಯೋಜನೆ ಜಾರಿಗೆ ತಂದು ಕೂಡ ಜನರು ಬವಣೆ ಅನುಭವಿಸುವಂತೆ ಆಗಿದೆ. ಮಿಶ್ರ ಪಥದಲ್ಲಿ ಬೇಂದ್ರೆ ಮತ್ತು ವಾಯುವ್ಯ ರಸ್ತೆ ಸಾರಿಗೆಯ ಬಸ್ ಗಳು ಸಂಚರಿಸುವುದರಿಂದ ಸಂಚಾರ ಸಮಸ್ಯೆ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರದಿಂದ ಕೆ.ಎಸ್.ಆರ್.ಟಿ.ಸಿ ಬಸ್ ಗಳ ಮೇಲಿನ ಕರ ಸಂಗ್ರಹಣೆ ವಿನಾಯತಿ ನೀಡಿದರೆ. ಸಂಸ್ಥೆಯ ನಷ್ಟ ಸರಿದೂಗಿಸಬಹದು. ಸಾರಿಗೆ ಸಚಿವರು ಖಾಸಗಿ ಬಸ್ ಗಳ ಹಾವಳಿಯನ್ನು ತಡೆಯಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಓಡಾಟ ಹೆಚ್ಚಿಸ ಬೇಕು ಎಂದರು.
Kshetra Samachara
23/01/2021 10:13 pm