ಯೋಜನೆ ಜಾರಿಗೆ ತರುವ ನೆಪದಲ್ಲಿ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡು ರೈತರಿಗೆ ಪರಿಹಾರ ಸಹ ನೀಡಲಾಗುತ್ತದೆ. ಆದರೆ, ಹೇಳದೇ ಕೇಳದೇ ಜಮೀನು ಸ್ವಾಧೀನಪಡಿಸಿಕೊಂಡು ಆ ಜಮೀನಿನ ಪಹಣಿ ಪತ್ರಿಕೆಯಲ್ಲೂ ಇಲಾಖೆ ತನ್ನ ಹೆಸರನ್ನು ನೋಂದಾಯಿಸಿಕೊಂಡರೆ ಜಮೀನು ಕಳೆದುಕೊಂಡ ರೈತನಿಗೆ ಹೇಗಾಗಿರಬಾರದು?
ಇಂತದ್ದೊಂದು ಘಟನೆ ಇದೀಗ ಧಾರವಾಡದಲ್ಲಿ ನಡೆದಿದ್ದು, ಜಮೀನು ಕಳೆದುಕೊಂಡ ರೈತ ಇಲಾಖೆಗೆ ಎಡತಾಕುತ್ತಿದ್ದಾನೆ.
ಹೀಗೆ ದೃಶ್ಯಗಳಲ್ಲಿ ದಾಖಲೆ ಪತ್ರಗಳನ್ನು ವೀಕ್ಷಣೆ ಮಾಡುತ್ತಿರುವ ರೈತನ ಹೆಸರು ಲಕ್ಷ್ಮಣ ಮುದುಕನಾಯ್ಕರ್ ಅಂತಾ. ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲೂಕಿನ ಕೊಂಡಿಕೊಪ್ಪ ಗ್ರಾಮದವರು. ಅಂಕೋಲಾ ಹೊಸಪೇಟೆ ಹೆದ್ದಾರಿ ಬಳಿ ಕೃಷಿ ಜಮೀನು ಹೊಂದಿದ್ದಾರೆ. 2014ರಲ್ಲಿ 13 ಗುಂಟೆ ಜಮೀನನ್ನು ಹೆದ್ದಾರಿಗಾಗಿ ವಿಶೇಷ ಭೂಸ್ವಾಧೀನ ಇಲಾಖೆ ಅಧಿಕಾರಿಗಳು ಸ್ವಾಧೀನಪಡಿಸಿಕೊಂಡು ಅದಕ್ಕೆ ಪರಿಹಾರವನ್ನೂ ನೀಡಿದ್ದಾರೆ. ಆದರೆ, ಇದೀಗ ಇಲಾಖೆ ಅಧಿಕಾರಿಗಳು ಮತ್ತೆ ಲಕ್ಷ್ಮಣ ಅವರಿಗೆ ಸೇರಿದ 31 ಗುಂಟೆ ಕೃಷಿ ಜಮೀನನ್ನು ಹೇಳದೇ ಕೇಳದೇ ಸ್ವಾಧೀನಪಡಿಸಿಕೊಂಡು ಪಹಣಿ ಪತ್ರಿಕೆಯಲ್ಲಿ ತಮ್ಮ ಹೆಸರನ್ನೂ ನೋಂದಾಯಿಸಿಕೊಂಡಿದ್ದಾರಂತೆ. ಇದನ್ನು ಕೇಳಲು ಹೋದರೆ ಇಂತಹ ಜಮೀನುಗಳ ಬಗ್ಗೆ ಸಿಡಿ ಮಾಡಿಕೊಂಡಿರುತ್ತೇವೆ ಜಮೀನು ಬೇಕಾದಾಗ ನಾವು ಸ್ವಾಧೀನಪಡಿಸಿಕೊಳ್ಳುತ್ತೇವೆ ಎಂಬ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರಂತೆ.
ಈ ಜಮೀನನ್ನು ವ್ಯಾಪಾರದ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಲಕ್ಷ್ಮಣ ಆರೋಪ ಮಾಡಿದ್ದು, ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರವನ್ನೂ ನೀಡಿಲ್ಲ. ಹೀಗಾಗಿ ಜಮೀನು ಕಳೆದುಕೊಂಡಿರುವ ರೈತ ಕಂಗಾಲಾಗಿದ್ದಾನೆ. ಕೂಡಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇದರತ್ತ ಗಮನಹರಿಸಿ ಈ ರೈತನಿಗೆ ಆದ ಅನ್ಯಾಯ ಸರಿಪಡಿಸಬೇಕಿದೆ.
Kshetra Samachara
02/06/2022 05:47 pm