ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿ.14 ರಂದು ಉಮೇದುವಾರರಿಗೆ ಚಿಹ್ನೆ ಹಂಚಿಕೆಗೆ ಕ್ರಮ

ಧಾರವಾಡ: ಗ್ರಾಮ ಪಂಚಾಯತ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಉಮೇದುವಾರಿಕೆ ಹಿಂಪಡೆಯಲು ನೀಡಿದ ಸಮಯಾವಕಾಶ ಮುಗಿದ ನಂತರ ಸ್ಪರ್ಧೆಯಲ್ಲಿ ಇರುವ ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳಿಗೆ ಅವರ ಸಮ್ಮುಖದಲ್ಲಿ ಚುನಾವಣಾ ಆಯೋಗದ ನಿಯಮಾನುಸಾರ ಡಿಸೆಂಬರ್ 14 ರಂದು ಚುನಾವಣಾಧಿಕಾರಿಗಳು ಚುನಾವಣಾ ಚಿಹ್ನೆಗಳನ್ನು ಹಂಚಿಕೆ ಮಾಡುತ್ತಾರೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕರ್ನಾಟಕ ಪಂಚಾಯತ್ ರಾಜ್ ನಿಯಮಗಳು, 1993ರ ನಿಯಮ 21 ರಂತೆ ರಾಜ್ಯ ಚುನಾವಣಾ ಆಯೋಗವು ಆಧಿಸೂಚನೆಯ ಮೂಲಕ ಮುಕ್ತ ಚಿಹ್ನೆಗಳ ಪಟ್ಟಿಯನ್ನು ಪ್ರಕಟಿಸಿದೆ. ರಾಷ್ಟ್ರೀಯ ಪ್ರಾದೇಶಿಕ ಹಾಗೂ ಇತರ ನೋಂದಾಯಿತ ಮಾನ್ಯತೆ ಪಡೆದ ಪಕ್ಷಗಳಿಗೆ ಈಗಾಗಲೇ ಹಂಚಿಯಾಗಿರುವ ಚಿನ್ಹೆಗಳನ್ನು ಹೊರತುಪಡಿಸಿ ಹಂಚಿಕೆಗೆ ಮುಕ್ತವಾಗಿರುವ ಚಿನ್ಹೆಗಳ ಪೈಕಿ ಯಾವುದಾದರೂ ಒಂದು ಚಿನ್ಹೆಯನ್ನು ಅಭ್ಯರ್ಥಿಗಳು ನಾಮಪತ್ರದಲ್ಲಿ ನಮೂದಿಸಬೇಕು. ಆ ಚಿನ್ಹೆಗಳ ವಿನಹಃ ಬೇರೆ ಯಾವುದೇ ಚಿನ್ಹೆಯನ್ನು ಯಾವುದೇ ಅಭ್ಯರ್ಥಿಗಳಿಗೆ ನೀಡುವುದಿಲ್ಲ.

ನಿಯಮ 22 ರಂತೆ ಅಭ್ಯರ್ಥಿಗಳಿಗೆ ಚಿನ್ಹೆಯನ್ನು ನಾಮಪತ್ರದ ಕ್ರಮಾಂಕವನ್ನು ಅನುಸರಿಸಿ ಹಂಚಿಕೆ ಮಾಡಲಾಗುತ್ತದೆ ಆದರೆ ಆ ಮೊದಲು ಯಾವುದೇ ಇಬ್ಬರು ಅಭ್ಯರ್ಥಿಗಳು ಒಂದೇ ಚಿನ್ಹೆಯನ್ನು ಕೋರಿದ್ದಾರೆಯೇ ಎಂಬುದನ್ನು ಪರಿಶೀಲಿಸಿ, ಒಂದು ವೇಳೆ ಯಾವುದೇ ಇಬ್ಬರು ಅಥವಾ ಹೆಚ್ಚು ಅಭ್ಯರ್ಥಿಗಳು ಒಂದೇ ಚಿನ್ಹೆಯನ್ನು ಕೋರಿದ್ದಲ್ಲಿ ನಿಯಮ 22 (5)(ಎ) ಪ್ರಕಾರ ಯಾರಿಗೆ ಆ ಚಿಹ್ನೆಯನ್ನು ನೀಡಬೇಕೆಂಬುದನ್ನು ಚೀಟಿ ಎತ್ತುವ ಮೂಲಕ ತೀರ್ಮಾನಿಸಲಾಗುತ್ತದೆ. ಉಳಿದ ಅಭ್ಯರ್ಥಿಗಳಿಗೆ ಅವರು ಕೋರಿದ 2ನೇಯ ಅಥವಾ 3ನೇಯ ಚಿನ್ಹೆಯನ್ನು ನಿಯಮ 22ನ್ನು ಅನುಸರಿಸಿ ನೀಡಲಾಗುವುದು.

ಉಮೇದುವಾರರಿಗೆ ಮಂಜೂರು ಮಾಡಿದ ಚುನಾವಣಾ ಚಿನ್ಹೆಯ ಮಾದರಿ ಪ್ರತಿಯನ್ನು ಸ್ಪರ್ದಿಸುವ ಅಭ್ಯರ್ಥಿಗೆ ಅಥವಾ ಚುನಾವಣಾ ಏಜಂಟನಿಗೆ ನೀಡಿ ಸ್ವೀಕೃತಿ ಪಡೆದುಕೊಳ್ಳಲಾಗುತ್ತದೆ. ಯಾವುದೇ ಅಭ್ಯರ್ಥಿಯು ಹಾಜರಿಲ್ಲದಿದ್ದಲ್ಲಿ ಚುನಾವಣಾಧಿಕಾರಿಯು ಆ ಅಭ್ಯರ್ಥಿಗೆ ಮಂಜೂರು ಮಾಡಿರುವ ಚಿನ್ಹೆಯ ಬಗ್ಗೆ ನಡವಳಿ ಮಾಡಿ, ಇತರೆ ಅಭ್ಯರ್ಥಿಗಳಿಂದ ಸಹಿ ಪಡೆದುಕೊಳ್ಳುವರು.

ಕ್ಷೇತ್ರವಾರು ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿ, ಅವರಿಗೆ ಚುನಾವಣಾ ಚಿನ್ಹೆಯನ್ನು ಹಂಚಿಕೆ ಮಾಡುವ ಸಂದರ್ಭದಲ್ಲಿ ಆಯಾ ಕ್ಷೇತ್ರದ ಅಭ್ಯರ್ಥಿಗಳು ಮಾತ್ರ ಹಾಜರಿರಬೇಕು. ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಕ್ರಮವಾಗಿ ಒಬ್ಬೊಬ್ಬರನ್ನೇ ಕರೆದು ಅವರಿಗೆ ನಿಯಮವನ್ನನುಸರಿಸಿ ಚುನಾವಣಾ ಚಿನ್ಹೆಯನ್ನು ಹಂಚಿಕೆ ಮಾಡಲಾಗುತ್ತದೆ. ಹೆಚ್ಚಿನ ಅಭ್ಯರ್ಥಿಗಳು ಒಂದೇ ಚಿಹ್ನೆಯನ್ನು ಕೋರಿರುವ ಸಂದರ್ಭದಲ್ಲಿ ಲಾಟರಿ ಮೂಲಕ ಚಿನ್ಹೆಯನ್ನು ಹಂಚಿಕೆ ಮಾಡಬೇಕಾಗಿರುವುದರಿಂದ, ಇಂತಹ ಎಲ್ಲಾ ಅಭ್ಯರ್ಥಿಯನ್ನು ಕರೆದು ಚಿಹ್ನೆಯನ್ನು ಹಂಚಿಕೆ ಮಾಡಬಹುದಾಗಿದ್ದು. ಕೊಠಡಿಯಲ್ಲಿ ಸೇರುವ ಅಧಿಕಾರಿ ಮತ್ತು ಅಭ್ಯರ್ಥಿಗಳು ಕೋವಿಡ್ ಮುಂಜಾಗೃತಾ ಕ್ರಮಗಳನ್ನು ತಪ್ಪದೆ ಪಾಲಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

12/12/2020 12:58 pm

Cinque Terre

22.57 K

Cinque Terre

0

ಸಂಬಂಧಿತ ಸುದ್ದಿ