ಧಾರವಾಡ: ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಗೆ ಅಕ್ಟೋಬರ್ 28 ರಂದು ಮತದಾನ ನಡೆಯುವ ಹಿನ್ನೆಲೆಯಲ್ಲಿ ಇಂದು ಸಂಜೆ 5 ಗಂಟೆಗೆ ಪ್ರಚಾರ ಕಾರ್ಯ ಅಂತ್ಯವಾಗಿದೆ.
ಪ್ರಚಾರ ಕಾರ್ಯಕ್ಕೆ ಆಗಮಿಸಿದ್ದ ಕ್ಷೇತ್ರದ ಮತದಾರರಲ್ಲದ ವ್ಯಕ್ತಿಗಳು ಕೂಡಲೇ ಕ್ಷೇತ್ರದಿಂದ ಹೊರಗಡೆ ತೆರಳಬೇಕು. ಮತದಾನ ಮತ್ತು ಮತಗಳ ಎಣಿಕೆ ನಡೆಯುವ ಸಮಯದಲ್ಲಿ ಕ್ಷೇತ್ರದ ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮದ್ಯಪಾನ, ಮದ್ಯ ಮಾರಾಟ, ಮದ್ಯ ಸಾಗಾಣಿಕೆ ಮತ್ತು ಮದ್ಯ ಸಂಗ್ರಹಣೆಯನ್ನು ನಿಷೇಧಿಸಲಾಗಿದೆ.
ಮತದಾನದ ದಿನದಂದು ಕ್ಷೇತ್ರದಾದ್ಯಂತ ಝರಾಕ್ಸ್, ಕಂಪ್ಯೂಟರ್ ಕೇಂದ್ರಗಳನ್ನು ಮುಚ್ಚಲು ಚುನಾವಣಾಧಿಕಾರಿಗಳೂ ಆಗಿರುವ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಆದೇಶ ಹೊರಡಿಸಿದ್ದಾರೆ.
ಅಕ್ಟೋಬರ್ 26 ರಂದು ಸಾಯಂಕಾಲ 5 ಗಂಟೆಯಿಂದ ಅ.28 ರ ಮಧ್ಯರಾತ್ರಿ 12 ಗಂಟೆಯವರೆಗೆ ಹಾಗೂ ಮತಗಳ ಎಣಿಕೆ ಹಿನ್ನೆಲೆಯಲ್ಲಿ ನವೆಂಬರ್ 01 ರ ಮಧ್ಯರಾತ್ರಿ 12 ಗಂಟೆಯಿಂದ ನ.3 ರ ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟ, ಮದ್ಯ ಸಾಗಾಣಿಕೆ ಮತ್ತು ಮದ್ಯ ಸಂಗ್ರಹಣೆಯನ್ನು, ಮದ್ಯದ ಅಂಗಡಿಗಳು, ಬಾರ್, ಕ್ಲಬ್‍ಗಳು ಮತ್ತು ಮದ್ಯದ ಡಿಪೋಗಳನ್ನು ಮುಚ್ಚತಕ್ಕದ್ದು ಇದಕ್ಕೆ ಸಂಬಂಧಿಸಿದಂತೆ ಲೈಸೆನ್ಸದಾರರು ಯಾವುದೇ ಪರಿಹಾರಕ್ಕೆ ಅರ್ಹರಾಗುವುದಿಲ್ಲ.
ಚುನಾವಣಾಧಿಕಾರಿಗಳಾಗಿರುವ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಇಂದು ಧಾರವಾಡ ಜಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಡಿಯೋ ಸಂವಾದದ ಮೂಲಕ ಕ್ಷೇತ್ರದ ವಿವಿಧ ಜಿಲ್ಲೆಗಳ ಸಹಾಯಕ ಚುನಾವಣಾಧಿಕಾರಿಗಳೂ ಆಗಿರುವ, ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಿದರು.
Kshetra Samachara
26/10/2020 08:59 pm