ಧಾರವಾಡ: ನಮ್ಮ ದೇಶದ ಹೆಮ್ಮೆಯ ಸಂಕೇತವಾಗಿರುವ ರಾಷ್ಟ್ರಧ್ವಜ ತಯಾರಿಕೆಗೆ ಬೇಕಾಗುವ ಶ್ರೇಷ್ಠ ಗುಣಮಟ್ಟದ ಖಾದಿ ಬಟ್ಟೆ ಧಾರವಾಡ ತಾಲ್ಲೂಕಿನ ಗರಗ ಖಾದಿ ಗ್ರಾಮೋದ್ಯೋಗ ಸಂಘದಲ್ಲಿ ತಯಾರಾಗುತ್ತಿದ್ದರೆ, ಹುಬ್ಬಳ್ಳಿ ನಗರದ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವು ಕಳೆದ 15 ವರ್ಷಗಳಿಂದ ತ್ರಿವರ್ಣ ಧ್ವಜಗಳನ್ನು ಸಿದ್ಧಪಡಿಸಿ ದೇಶದೆಲ್ಲೆಡೆ ಪೂರೈಕೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಧಾರವಾಡದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ 39 ಮನೆಗಳು ಪೂರ್ಣ ಪ್ರಮಾಣದಲ್ಲಿ, 93 ಮನೆಗಳು ಶೇಕಡಾ 25 ರಿಂದ 75 ರಷ್ಟು, 1622 ಮನೆಗಳು ಅಲ್ಪ ಪ್ರಮಾಣದಲ್ಲಿ ಹಾನಿಯಾಗಿರುವುದು ಸೇರಿ ಒಟ್ಟು 1754 ಮನೆಗಳು ಹಾನಿಗೀಡಾಗಿವೆ. ಸರ್ಕಾರದ ಮಾರ್ಗಸೂಚಿಗಳನ್ವಯ ಹಾನಿಗೀಡಾದವರಿಗೆ ಪರಿಹಾರದ ಹಣವನ್ನು ನೇರವಾಗಿ ಜಮಾ ಮಾಡಲಾಗುವುದು.
ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಗೆ 23 ಸಾವಿರ ಹೆಕ್ಟೇರ್‌ಗೂ ಅಧಿಕ ಕೃಷಿ 276 ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು ಸುಮಾರು 144 ಕೋಟಿ ಮೌಲ್ಯದ ಬೆಳೆ ಹಾನಿ ಅಂದಾಜಿಸಲಾಗಿದೆ. ಮುಂಗಾರು ಹಂಗಾಮಿನಲ್ಲಿ 20 ಸಾವಿರ ಕ್ವಿಂಟಲ್‍ಗೂ ಅಧಿಕ ಬಿತ್ತನೆ ಬೀಜಗಳನ್ನು ರೈತರಿಗೆ ಸಹಾಯಧನದಲ್ಲಿ ಪೂರೈಸಲಾಗಿದೆ. 17 ಸಾವಿರ ಮೆಟ್ರಿಕ್ ಟನ್ ಯೂರಿಯಾ ಸೇರಿದಂತೆ ಒಟ್ಟು ಸುಮಾರು 37 ಸಾವಿರ ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳನ್ನು ಒದಗಿಸಲಾಗಿದೆ ಎಂದರು.
ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ವಿದ್ಯುತ್ ಮಗ್ಗ ನೇಕಾರರಿಗೆ ತಲಾ 3 ಸಾವಿರದಂತೆ ಇಲ್ಲಿಯವರೆಗೆ ಸುಮಾರು 56 ಸಾವಿರ ನೇಕಾರರಿಗೆ ಸುಮಾರು 17 ಕೋಟಿ ಪರಿಹಾರ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ. ಕಳೆದ 2 ವರ್ಷಗಳಲ್ಲಿ ಧಾರವಾಡ ಜಿಲ್ಲೆಯ 1360 ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ನೇಕಾರರಿಗೆ ಈ ಸೌಲಭ್ಯ ದೊರಕಿದೆ ಎಂದರು.
ನಂತರ ಸಚಿವರು ಪೊಲೀಸ್ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದರು. ಶಾಸಕ ಅಮೃತ ದೇಸಾಯಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಪೊಲೀಸ್ ಆಯುಕ್ತ ಲಾಬುರಾಮ್, ಎಸ್ಪಿ ಪಿ.ಕೃಷ್ಣಕಾಂತ, ಜಿಪಂ ಸಿಇಓ ಸುಶೀಲಾ ಸೇರಿದಂತೆ ಎಲ್ಲಾ ಹಂತದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Kshetra Samachara
15/08/2021 11:53 am