ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗಲಭೆಯ ಹಿಂದೆ ರಾಜಕೀಯ ನಾಯಕರ ಕೈವಾಡ: ದಿನಕ್ಕೊಂದು ಹೊಸ ತಿರುವು ಪಡೆಯುತ್ತಿರುವ ಪ್ರಕರಣ

ಹುಬ್ಬಳ್ಳಿ: ಹಳೆ ಹುಬ್ಬಳ್ಳಿಯ ಗಲಭೆ ಪ್ರಕರಣ ದಿನಕ್ಕೊಂದು ರಾಜಕೀಯ ತಿರುವು ಪಡೆದುಕೊಂಡಿರುವುದು ಗೋಚರವಾಗುತ್ತಿದೆ. ಹುಬ್ಬಳ್ಳಿ ಗಲಭೆ ಮುಂದಿಟ್ಟುಕೊಂಡು ಸ್ಪರ್ಧೆಗೆ ಬಿದ್ದವರ ಹಾಗೆ ರಾಜಕಾರಣಿಗಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇತ್ತ ಮತ್ತೊಂದೆಡೆ ಪೊಲೀಸ್ ತನಿಖೆ ಶರವೇಗ ಪಡೆದುಕೊಂಡಿದ್ದು ಇಂದು ಓವೈಸಿ ಪಕ್ಷದ ಮತ್ತೊಬ್ಬ ಮುಖಂಡನನ್ನು ವಶಕ್ಕೆ ಪಡೆಯಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಒಂದು ತುಣುಕು ಕಳೆದ ಒಂದು ವಾರದಿಂದ ಹುಬ್ಬಳ್ಳಿಗರ ನೆಮ್ಮದಿಗೆ ಕೊಳ್ಳೆ ಇಟ್ಟಿದೆ. ವಿವಾದಾತ್ಮಕ ಪೋಸ್ಟ್ ಗೆ ಸಂಬಂಧಿಸಿದಂತೆ ನಡೆದ ಗಲಭೆ ರಾಜಕೀಯ ತಿರುವು ಪಡೆದುಕೊಂಡಿದೆ. ಗಲಭೆ ಹಿನ್ನೆಲೆಯಲ್ಲಿ ಪೊಲೀಸರು ಈಗಾಗಲೇ ನಿಷ್ಪಕ್ಷಪಾತ ತನಿಖೆ ನಡೆಸುತ್ತಿದ್ದರೆ, ಮತ್ತೊಂದೆಡೆ ರಾಜಕಾರಣಿಗಳು ಉರಿಯುವ ಬೆಂಕಿಯಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇಂದು ಹಳೇ ಹುಬ್ಬಳ್ಳಿಯ ಪೊಲೀಸ ಠಾಣೆಗೆ ಭೇಟಿ ಕೊಟ್ಟ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಗಲಭೆಯಲ್ಲಿ ಕಾಂಗ್ರೆಸ್ ಕೈವಾಡವಿದೆ ಸ್ಥಳೀಯ ಕೈ ನಾಯಕರ ಕೈವಾಡವಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆರೋಪಿಗಳನ್ನ ಬಂಧಿಸಿ ಕಠಿಣ ಕ್ರಮ‌ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಗಲಭೆಗೆ ಸಂಬಂಧಿಸಿದಂತೆ, ವಿವಾದಾತ್ಮಕ ಪೋಸ್ಟ್ ಮಾಡಿದ್ದ ಎನ್ನಲಾದ ವೀರಭದ್ರಗೌಡ ಪಾಟೀಲನನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಮತ್ತೊಂದೆಡೆ ಮಾಸ್ಟರ್ ಮೈಂಡ್ ಎನ್ನಲಾಗುವ ವಾಸಿಂ ಪಠಾಣ್ ನನ್ನು ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಂತೆ ಪಠಾಣ, ಒಂದೊಂದೇ ಸತ್ಯವನ್ನು ಹೇಳುತ್ತಿದ್ದಾನೆ. ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸುವ ಯತ್ನ ಮಾಡಲಾಗುತ್ತಿದೆ ಎಂದಿರುವ ಆತ, ಕಲ್ಲು ತೂರಾಟದಲ್ಲಿ ನನ್ನ ಪಾತ್ರ ಇಲ್ಲಾ ಎಂದು ತನಿಖಾಧಿಕಾರಿಗಳ ಎದುರು ಹೇಳಿದ್ದಾನೆ. ಈ ಗಲಭೆ ಸಂಚನ್ನು ರೂಪಿಸಿದವರ ಹೆಸರು ಹೇಳುತ್ತೇನೆ ಎಂದು ವಾಸಿಂ ಹೇಳಿದ್ದು, ಕಾಂಗ್ರೆಸ್ ಹಾಗೂ ಎಐಎಂಐಎಂ ನಾಯಕರ ಸುತ್ತ ಈ ಪ್ರಕರಣ ಗಿರಕಿ ಹೊಡೆಯುವ ಸಾಧ್ಯತೆಗಳು ಗೋಚರಿಸುತ್ತಿವೆ. ಮಹತ್ವದ ಬೆಳವಣಿಗೆಯೊಂದರಲ್ಲಿ ಹಳೇ ಹುಬ್ಬಳ್ಳಿ ಪೊಲೀಸರು ಎಐಎಂಐಎಂ ಮುಖಂಡ, ಪಾಲಿಕೆ ಸದಸ್ಯ ನಜೀರ ಅಹ್ಮದ ಹೊನ್ಯಾಳನನ್ನು ವಶಕ್ಕೆ ಪಡೆದಿದ್ದು, ಗಲಭೆಗೆ ಪ್ರಮುಖ ರೂವಾರಿಗಳು ಯಾರ‌್ಯಾರು ಎಂಬುದರ ಎಳೆ ಎಳೆಯಾಗಿ ಮಾಹಿತಿಯನ್ನು ಬಂಧಿತ ವಾಸೀಂ ಪಠಾಣ್ ಪೊಲೀಸರೊಂದಿಗೆ ಹಂಚಿಕೊಳ್ಳುತ್ತಿದ್ದಾನೆ.

ಹುಬ್ಬಳ್ಳಿ ಗಲಭೆ ಪ್ರಕರಣ ದಿನೇ ದಿನೇ ಸ್ಪೋಟಕ ತಿರುವು ಪಡೆದುಕೊಳ್ಳುತ್ತಿದ್ದು, ಇವರೆಗೆ 155 ಜನರನ್ನು ಬಂಧಿಸಲಾಗಿದೆ. ಇನ್ನೂ ಈ ಗಲಭೆಗೆ ಸಂಬಂಧಿಸಿದ ಪ್ರಮುಖ ಆರೋಪಿಗಳನ್ನ ಪತ್ತೆಹಚ್ಚುವ ಕಾರ್ಯಕ್ಕೆ ಪೊಲೀಸ್ ಇಲಾಖೆ ಮುಂದಾಗಿದ್ದು, ಇನ್ನೂ ಯಾವ್ಯಾವ ಘಟಾನುಘಟಿಗಳು ಈ ಪ್ರಕರಣದಲ್ಲಿ ತಳುಕು ಹಾಕಿಕೊಳ್ಳಲಿದ್ದಾರೆ ಎಂದು ಕಾದುನೋಡಬೇಕು.

Edited By : Shivu K
Kshetra Samachara

Kshetra Samachara

24/04/2022 08:50 am

Cinque Terre

71.99 K

Cinque Terre

10

ಸಂಬಂಧಿತ ಸುದ್ದಿ