ಹುಬ್ಬಳ್ಳಿ: ಕಲ್ಲು ಹೊಡೆದು ಹೇಗೋ ಮನೆಗೆ ಓಡಿದರಾಯಿತು ಎಂದುಕೊಂಡಿದ್ದ ಕಿಡಿಗೇಡಿಗಳಿಗೆ ಪೊಲೀಸ್ ಇಲಾಖೆ ಶಾಕ್ ನೀಡಿದೆ. ಗಲಾಟೆ ಮಾಡಿದ್ದ ಪುಂಡರ ಹಾವಳಿಗೆ ಬ್ರೇಕ್ ಹಾಕಿ ಕ್ರೈಂ ನಿಯಂತ್ರಣಕ್ಕೆ ಹೊಸ ಪ್ಲ್ಯಾನ್ ಮಾಡಿದೆ. ಗಲಾಟೆ ಮಾಡಿದ್ದವರಿಗೆ ಮತ್ತೊಂದು ಪಟ್ಟಿಯಲ್ಲಿ ಸೇರಿಸಲು ಸಿದ್ಧವಾಗಿದೆ. ಹಾಗಿದ್ರೆ ಏನಿದು ಪ್ಲ್ಯಾನ್ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೈಲ್ಸ್...
ಅವಳಿನಗರದಲ್ಲಿ ಈ ಹಿಂದೆ ನಡೆದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರು ಸಹ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಪಾಲ್ಗೊಂಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಗಲಾಟೆಯಲ್ಲಿ ಭಾಗಿಯಾದವರನ್ನು ರೌಡಿ ಪಟ್ಟಿಯಲ್ಲಿ ಸೇರಿಸಲು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ನಿರ್ಧರಿಸಿದೆ. ಗಲಭೆಗೆ ಸಂಬಂಧಿಸಿ ಈವರೆಗೆ ಒಟ್ಟು 146 ಆರೋಪಿಗಳ ಬಂಧನವಾಗಿದ್ದು, ಇದರಲ್ಲಿ ಇಬ್ಬರು ರೌಡಿಶೀಟರ್‌ಗಳಿದ್ದಾರೆ. 20ಕ್ಕೂ ಹೆಚ್ಚು ಜನ ಅವಳಿ ನಗರಗಳ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಅಪರಾಧಗಳ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಆ ಕುರಿತು ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ.
ಏ.16ರಂದು ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಮಧ್ಯೆ ವ್ಯಕ್ತಿಯೊಬ್ಬ ಸಂಘಟನೆಯೊಂದರ ಬಾವುಟ ಹಾರಾಡಿಸಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರ ಮುಖಂಡರನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಅಲ್ಲದೆ, ಮುಖಂಡರೊಬ್ಬರ ಪುತ್ರನು ಸಹ ಗಲಭೆಗೆ ಪ್ರಚೋದನೆ ನೀಡಿದ್ದಾನೆ ಎನ್ನುವ ಆರೋಪದ ಮೇಲೆ ಅವನನ್ನು ಸಹ ವಶಕ್ಕೆ ಪಡೆಯಲು ತೀರ್ಮಾನಿಸಿದ್ದಾರೆ. ಒಮ್ಮೆಲೆ ಎಲ್ಲರನ್ನು ಬಂಧಿಸಿದರೆ ಶಾಂತಿ ಕದಡಬಹುದು ಎಂದು ಹಂತ ಹಂತವಾಗಿ ಬಂಧಿಸುವ ಯೋಜನೆ ರೂಪಿಸಿದ್ದಾರೆ. ಯಾವುದೇ ಸಂಘಟನೆಯಿರಲಿ, ಮುಖಂಡರ ಮಕ್ಕಳಿರಲಿ ಅಪರಾಧ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಪಾಲಿಕೆ ಸದಸ್ಯರೊಬ್ಬರನ್ನು ಬಂಧಿಸಲಾಗಿದೆ. ಗಲಭೆಯಲ್ಲಿ ಯಾವ ಸಂಘಟನೆಗಳು ಪಾಲ್ಗೊಂಡಿವೆ ಎಂದು ತನಿಖಾ ಹಂತದಲ್ಲಿ ಹೇಳಲು ಸಾಧ್ಯವಿಲ್ಲ. ವೀಡಿಯೊ, ಸಿಸಿಟಿವಿ ಕ್ಯಾಮೆರಾ ಹಾಗೂ ಇನ್ನಿತರ ತಾಂತ್ರಿಕ ಸಾಧನಗಳ ದಾಖಲೆಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಆವರಣದಲ್ಲಿ ಕಲ್ಲು ತೂರಾಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಕಮೀಷನರೇಟ್ ಮತ್ತಷ್ಟು ಕಿಂಗ್ ಪಿನ್ ಬಂಧನಕ್ಕೆ ಬಲೆ ಬೀಸಿದ್ದು ಮತ್ತಷ್ಟು ಕಾಣದ ಕೈಗಳು ಹೊರ ಬರಬೇಕಿದೆ.
Kshetra Samachara
26/04/2022 02:05 pm