ಧಾರವಾಡ: ಇತ್ತೀಚೆಗೆ ಧಾರವಾಡದ ಪ್ರಸಿದ್ಧ ನುಗ್ಗಿಕೇರಿಯಲ್ಲಿ ನಡೆದ ಕಲ್ಲಂಗಡಿ ಗಲಾಟೆ ಹೊಸ ತಿರುವು ಪಡೆದುಕೊಂಡಿದೆ. ಹೌದು! ವಾಸ್ತವವಾಗಿ ನಬೀಸಾಬ್ ಕಿಲ್ಲೇದಾರ ಎಂಬಾತ ಗಲಾಟೆ ನಡೆದ ದಿನ ಅಲ್ಲಿ ಇರಲೇ ಇಲ್ಲ ಎಂದು ಶ್ರೀರಾಮ ಸೇನೆ ಕಾರ್ಯಕರ್ತರು ಕುತೂಹಲಕಾರಿ ಸಂಗತಿಯೊಂದನ್ನು ತಿಳಿಸಿದ್ದಾರೆ.
ಶ್ರೀರಾಮ ಸೇನೆ ಕಾರ್ಯಕರ್ತರಾದ ಮೈಲಾರಪ್ಪ ಗುಡ್ಡಪ್ಪನವರ, ಚಿದಂಬರ ಕಲಾಲ ಮತ್ತು ಕುಮಾರ ಕಟ್ಟಿಮನಿ ಎಂಬುವವರು ಸೇರಿಕೊಂಡು ನುಗ್ಗಿಕೇರಿ ದೇವಸ್ಥಾನಕ್ಕೆ ಹೊರಟಿದ್ದ ವೇಳೆ ಅಲ್ಲೇ ಇದ್ದ ಮುಸ್ಲಿಂ ವ್ಯಾಪಾರಿಯೊಬ್ಬ ಅವರಿಗೆ ಕಾಯಿ, ಕರ್ಪೂರ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದನಂತೆ. ಅವರು ಅವನ ಬಳಿ ಕಾಯಿ, ಕರ್ಪೂರ ತೆಗೆದುಕೊಳ್ಳದೇ ದೇವರ ದರ್ಶನ ಮಾಡಿ ವಾಪಸ್ ಹೊರಗಡೆ ಬಂದ ವೇಳೆ ಮುಸ್ಲಿಂ ವ್ಯಾಪಾರಿಯೊಬ್ಬ ಕಲ್ಲಂಗಡಿಗೆ ಉಗುಳಿ ಅದನ್ನು ಕೊಡಲು ಮುಂದಾದನಂತೆ. ಹೀಗೇಕೆ ಮಾಡುತ್ತಿರುವೆ ಎಂದು ಪ್ರಶ್ನಿಸಿದಾಗ ಹೀಗೆ ಉಗುಳಿ ಕೊಟ್ಟರೆ ನಿಮ್ಮ ಮೈಮೇಲಿನ ದೆವ್ವ ಹೋಗುತ್ತದೆ ಎಂದನಂತೆ. ಇದರಿಂದ ತೀವ್ರ ವಾಗ್ವಾದ ನಡೆದಿದ್ದರಿಂದ ಆ ಮುಸ್ಲಿಂ ವ್ಯಾಪಾರಿ ಅಲ್ಲೇ ಇದ್ದ ಚಾಕು ತೆಗೆದುಕೊಂಡು ನಮ್ಮ ಮೇಲೆ ಹಲ್ಲೆ ಮಾಡಲು ಮುಂದಾದ ಎಂದು ಶ್ರೀರಾಮ ಸೇನೆ ಕಾರ್ಯರ್ತರು ಆರೋಪಿಸಿದ್ದಾರೆ.
ಇದರಿಂದ ತಳ್ಳಾಟ, ನೂಕಾಟ ನಡೆದು ಆ ವ್ಯಕ್ತಿ ಕಲ್ಲಂಗಡಿ ಮೇಲೆ ಬಿದ್ದಿದ್ದರಿಂದ ಕೆಲ ಕಲ್ಲಂಗಡಿ ಹಣ್ಣುಗಳು ಬಿದ್ದು ಒಡೆದವು. ವಾಸ್ತವವಾಗಿ ನಬೀಸಾಬ್ ಕಿಲ್ಲೇದಾರ ಎಂಬಾತ ಕಲ್ಲಂಗಡಿ ಒಡೆದ ಸಂದರ್ಭದಲ್ಲಿ ಅಲ್ಲಿ ಇರಲೇ ಇಲ್ಲ. ಆನಂತರ ಬಂದು ರಾದ್ಧಾಂತ ಮಾಡಿದ್ದಾನೆ ಎಂದು ಶ್ರೀರಾಮ ಸೇನೆ ಕಾರ್ಯಕರ್ತರು ಆರೋಪ ಮಾಡಿ, ಇದೀಗ ಚಾಕು ಹಿಡಿದು ಹಲ್ಲೆ ಮಾಡಲು ಮುಂದಾದ ವ್ಯಕ್ತಿಯ ಮೇಲೆ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.
ಶ್ರೀರಾಮ ಸೇನೆ ಕಾರ್ಯಕರ್ತರು ಮಾಡಿರುವ ಆರೋಪವನ್ನು ನಬೀಸಾಬ್ ಅಲ್ಲಗಳೆದಿದ್ದಾರೆ. ಅಕ್ಕಪಕ್ಕದ ವ್ಯಾಪಾರಿಗಳನ್ನು ಕೇಳಬಹುದು. ಅವರು ಕಲ್ಲಂಗಡಿ ಒಡೆಯಲಾರಂಭಿಸಿದ್ದರಿಂದ ಹೆದರಿ ಓಡಿ ಬಂದೆವು ಎಂದಿದ್ದಾರೆ.
ಸದ್ಯ ಶ್ರೀರಾಮ ಸೇನೆ ಕಾರ್ಯಕರ್ತರೂ ಪ್ರತಿದೂರು ನೀಡಿದ್ದು, ಪೊಲೀಸರು ಈ ಪ್ರಕರಣವನ್ನು ಹೇಗೆ ಪರಿಗಣಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/04/2022 04:57 pm