ಧಾರವಾಡ: ದೆಹಲಿಯಲ್ಲಿ ರೈತರು ಕಳೆದ 27 ದಿನಗಳಿಂದ ಧರಣಿ ನಡೆಸುತ್ತಿದ್ದು, ದೇಶದ ಪ್ರಧಾನಿ ನರೇಂದ್ರ ಮೋದಿ ರೈತರತ್ತ ಕಣ್ಣೆತ್ತಿಯೂ ನೋಡಿಲ್ಲ. ದೇಶದ ರೈತರು ನಿಮಗೆ ಶಾಪ ಹಾಕ್ತಾರೆ. ನೀವು ಬಹಳ ದಿನ ಬದುಕುಳಿಯುವುದಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇವತ್ತು ಚರಣ್ ಸಿಂಗ್ ಅವರ (ರೈತ ದಿನಾಚರಣೆ) ದಿನಾಚರಣೆಯನ್ನು ಆಚರಣೆ ಮಾಡಬೇಕಿತ್ತು. ಆದರೆ, ದೆಹಲಿಯಲ್ಲಿ ರೈತರು ಧರಣಿ ನಡೆಸುತ್ತಿದ್ದಾರೆ. 33 ಜನ ರೈತರು ಅಸುನೀಗಿದ್ದಾರೆ. ಈ ಹಿನ್ನೆಲೆಯಲ್ಲಿ ಚರಣ್ ಸಿಂಗ್ ಅವರ ದಿನಾಚರಣೆ ಮಾಡಲು ಆಗುತ್ತಿಲ್ಲ. ಇದು ಬಹಳ ನೋವಿನ ಸಂಗತಿ. ಈ ದೇಶದ ಇತಿಹಾಸದಲ್ಲೇ 27 ದಿನಗಳಿಂದ ನಡೆಯುತ್ತಿರುವ ರೈತರ ಧರಣಿ ದೊಡ್ಡ ಧರಣಿಯಾಗಿದೆ ಎಂದರು.
ಸರ್ಕಾರ ಎಷ್ಟು ರೈತರನ್ನು ಬಲಿ ತೆಗೆದುಕೊಂಡ ಬಳಿಕ ಈ ಕಾಯ್ದೆಗಳನ್ನು ಹಿಂಪಡೆಯುತ್ತದೆ? ಎಂದು ಪ್ರಶ್ನಿಸಿದ ಪಾಟೀಲರು, ಧರ್ಮ, ಜಾತಿ, ಪೂಜೆ, ಪುರಸ್ಕಾರದ ಮೂಲಕ ದೇಶದ ಪ್ರಗತಿ ಸಾಧ್ಯವೇ? ಎಂದು ಪ್ರಶ್ನಿಸಿದರು.
ಬಿಜೆಪಿ ನಾಯಕರು ರಾಜಕೀಯವಾಗಿ ಸೋಲುತ್ತೇವೆ ಎಂಬ ಹಠಕ್ಕೆ ಬಿದ್ದಿದ್ದಾರೆ. ಆದರೆ ಈ ಹಠ, ಪ್ರತಿಷ್ಟೆಯಿಂದ ರೈತರ ಬದುಕು ಹಾಳಾಗಲಿದೆ. ರೈತರ ಹಿತದೃಷ್ಟಿಯಿಂದ ಕಾಯ್ದೆ ಹಿಂಪಡೆದರೆ ರೈತ ಸಮುದಾಯ ಹಾಗೂ ಕೃಷಿ ಕ್ಷೇತ್ರಕ್ಕೆ ಒಳಿತಾಗಲಿದೆ ಎಂದರು.
Kshetra Samachara
23/12/2020 01:07 pm