ಧಾರವಾಡ: ಗ್ರಾಮ ಪಂಚಾಯ್ತಿ ಗದ್ದುಗೆಗೆ ನಾಳೆ ಫೈನಲ್ ಕಾದಾಟ ನಡೆಯಲಿದೆ. ನಾಳೆ ನಡೆಯುವ ಕಾದಾಟದಲ್ಲಿ ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಿ ಮತಪೆಟ್ಟಿಗೆ ಸೇರಲಿದೆ.
ನಾಳೆ ಧಾರವಾಡ ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯ್ತಿ ಚುನಾವಣೆ ಜರುಗಲಿದ್ದು, ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಧಾರವಾಡದ ಬಾಸೆಲ್ ಮಿಷನ್ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆಯಲ್ಲಿ ಸ್ಥಾಪಿಸಲಾಗಿರುವ ಗ್ರಾಮ ಪಂಚಾಯ್ತಿ ಚುನಾವಣೆ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊದಲ ಹಂತದಲ್ಲಿ ಧಾರವಾಡ ತಾಲ್ಲೂಕಿನ 34 ಮತ್ತು ಅಳ್ನಾವರ ತಾಲ್ಲೂಕಿನ 4 ಮತ್ತು ಕಲಘಟಗಿ ತಾಲೂಕಿನ 27 ಒಟ್ಟು 65 ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆಯಲಿದೆ. ಈ ಚುನಾವಣೆ ಸಂಬಂಧ ಧಾರವಾಡ 238 ಮತ್ತು ಅಳ್ನಾವರ ತಾಲ್ಲೂಕಿನ 21, ಕಲಘಟಗಿ ತಾಲೂಕಿನ 153 ಒಟ್ಟು 412 ಮತಗಟ್ಟೆಗಳಲ್ಲಿ ಡಿಸೆಂಬರ್ 22 ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ ಎಂದು ಡಿಸಿ ನಿತೇಶ ಪಾಟೀಲ ತಿಳಿಸಿದರು.
ಚುನಾವಣಾ ಆಯೋಗದ ನಿರ್ದೇಶನದಂತೆ ತಾಲೂಕಾವಾರು ಸಾಮಾನ್ಯ, ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಮತಗಟ್ಟೆಗಳೆಂದು ಮತದಾನ ಕೇಂದ್ರಗಳನ್ನು ಗುರುತಿಸಲಾಗಿದೆ. ಪ್ರತಿಯೊಂದು ಮತಗಟ್ಟೆಗೂ ಒಬ್ಬ ಅಧ್ಯಕ್ಷಾಧಿಕಾರಿ, ಸಹಾಯಕ ಅಧ್ಯಕ್ಷಾಧಿಕಾರಿ ಮತ್ತು ಮೂವರು ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಈಗಾಗಲೇ ಆಯಾ ಮತಗಟ್ಟೆಗಳಿಗೆ ಪೊಲೀಸರನ್ನು ನಿಯೋಜಿಸಲಾಗಿದ್ದು, ಸೋಮವಾರ ಸಂಜೆಯೇ ಮತಗಟ್ಟೆ ಸಿಬ್ಬಂದಿ ಹಾಗೂ ಪೊಲೀಸರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.
Kshetra Samachara
21/12/2020 05:26 pm