ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಡಿಸೆಂಬರ್ 22 ರಂದು ಧಾರವಾಡ, ಅಳ್ನಾವರ ಮತ್ತು ಕಲಘಟಗಿ ತಾಲೂಕುಗಳ 65 ಗ್ರಾಮ ಪಂಚಾಯತಿಗಳಲ್ಲಿ ಮತದಾನಕ್ಕಾಗಿ ಒಟ್ಟು 421 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಇದರಲ್ಲಿ 271 ಸಾಮಾನ್ಯ, 85 ಸೂಕ್ಷ್ಮ ಮತ್ತು 65 ಮತಗಟ್ಟೆಗಳನ್ನು ಅತೀ ಸೂಕ್ಷ್ಮ ಮತಗಟ್ಟೆಗಳನ್ನಾಗಿ ಗುರುತಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಧಾರವಾಡ ತಾಲೂಕಿನ 34 ಗ್ರಾಮ ಪಂಚಾಯತಗಳಲ್ಲಿ ಚುನಾವಣೆ ಜರುಗಿಸಲು 182 ಸಾಮಾನ್ಯ, 31 ಸೂಕ್ಷ್ಮ ಹಾಗೂ 30 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ ಮತ್ತು ಕೊಟಬಾಗಿ ಗ್ರಾಮ ಪಂಚಾಯತಿಯ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿರುವುದರಿಂದ ಕೊಟಬಾಗಿ ವಾರ್ಡ್ ಒಂದರ ಮತಗಟ್ಟೆ-127, 127ಎ ಮತ್ತು ಕೊಟಬಾಗಿ ವಾರ್ಡ್ ನಂ. ಎರಡರ ಮತಗಟ್ಟೆ-128, 128ಎ ಮತ್ತು ಜೀರಿಗವಾಡದ ಮತಗಟ್ಟೆ-132ರಲ್ಲಿ ಮತದಾನ ಪ್ರಕ್ರಿಯೆಗಳು ನಡೆಯುವುದಿಲ್ಲ.
ಧಾರವಾಡ ತಾಲೂಕಿನಲ್ಲಿ ಒಟ್ಟು 238 ಮತಗಟ್ಟೆಗಳನ್ನು ಮತದಾನ ಕಾರ್ಯಕ್ಕಾಗಿ ಸಿದ್ಧಗೊಳಿಸಲಾಗಿದೆ.
ಅಳ್ನಾವರ ತಾಲೂಕಿನ ನಾಲ್ಕು ಗ್ರಾಮ ಪಂಚಾಯತಿಗಳಲ್ಲಿ ಚುನಾವಣೆ ಜರುಗಿಸಲು 5 ಸಾಮಾನ್ಯ, 10 ಸೂಕ್ಷ್ಮ ಮತ್ತು 6 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಒಟ್ಟು ಅಳ್ನಾವರ ತಾಲೂಕಿನಲ್ಲಿ 21 ಮತಗಟ್ಟೆಗಳನ್ನು ಮತದಾನ ಕಾರ್ಯಕ್ಕಾಗಿ ಸಿದ್ಧಗೊಳಿಸಲಾಗಿದೆ.
ಕಲಘಟಗಿ ತಾಲೂಕಿನ 27 ಗ್ರಾಮ ಪಂಚಾಯತಿಗಳಲ್ಲಿ ಚುನಾವಣೆ ಜರುಗಿಸಲು 84 ಸಾಮಾನ್ಯ, 44 ಸೂಕ್ಷ್ಮ ಮತ್ತು 29 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ ಮತ್ತು ನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ.
ಸೂರಶೆಟ್ಟಿಕೊಪ್ಪ ಗ್ರಾಮ ಪಂಚಾಯತಿಯ ದ್ಯಾಮಾಪೂರ ಕ್ಷೇತ್ರದ ಮತಗಟ್ಟೆ-70, ಗುಡ್ಡದಹುಲಿಕಟ್ಟಿ ಗ್ರಾಮ ಪಂಚಾಯತಿಯ ಸೋಲಾರಗೊಪ್ಪ ಕ್ಷೇತ್ರದ ಮತಗಟ್ಟೆ-73, ಸೂಳಿಕಟ್ಟಿ ಗ್ರಾಮ ಪಂಚಾಯತಿಯ ಕಂದ್ಲಿ ಕ್ಷೇತ್ರದ ಮತಗಟ್ಟೆ-117 ಮತ್ತು ತಂಬೂರ ಗ್ರಾಮ ಪಂಚಾಯತಿಯ ಹುಲಗಿನಕೊಪ್ಪ ಕ್ಷೇತ್ರದ ಮತಗಟ್ಟೆ-132 ರಲ್ಲಿ ಮತದಾನ ಪ್ರಕ್ರಿಯೆಗಳು ನಡೆಯುವುದಿಲ್ಲ.
ಕಲಘಟಗಿ ತಾಲೂಕಿನಲ್ಲಿ ಒಟ್ಟು 157 ಮತಗಟ್ಟೆಗಳನ್ನು ಮತದಾನ ಕಾರ್ಯಕ್ಕಾಗಿ ಸಿದ್ಧಗೊಳಿಸಲಾಗಿದೆ.
ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯತಗಳ ಚುನಾವಣೆಗಾಗಿ ಒಟ್ಟು 421 ಮತಗಟ್ಟೆಗಳನ್ನು ಸಿದ್ಧಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Kshetra Samachara
19/12/2020 02:05 pm