ಧಾರವಾಡ: ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಜರುಗುವ ಧಾರವಾಡ, ಅಳ್ನಾವರ, ಕಲಘಟಗಿ ತಾಲೂಕುಗಳಲ್ಲಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಉಮೇದುವಾರಿಕೆ ಸಲ್ಲಿಸಿದ್ದ ಅಭ್ಯರ್ಥಿಗಳ ಪೈಕಿ 47 ಜನ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದು, ಅಂತಿಮವಾಗಿ 2,748 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಧಾರವಾಡ, ಕಲಘಟಗಿ ಮತ್ತು ಅಳ್ನಾವರ ತಾಲೂಕಿನ ಒಟ್ಟು ಕ್ರಮಬದ್ಧ 3,096 ನಾಮಪತ್ರಗಳ ಪೈಕಿ 47 ಜನ ಅವಿರೋಧ ಆಯ್ಕೆಯಾಗಿದ್ದಾರೆ.
ಮತ್ತು 302 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ. ಅಂತಿಮವಾಗಿ ಚುನಾವಣಾ ಕ್ಷೇತ್ರಗಳಲ್ಲಿ 2,748 ಜನ ಅಭ್ಯರ್ಥಿಗಳು ಸ್ಪರ್ಧೆಯಲ್ಲಿ ಉಳಿದಿದ್ದಾರೆ.
ಮೂರು ತಾಲೂಕಿನ ಒಟ್ಟು 65 ಗ್ರಾಮ ಪಂಚಾಯತಿಗಳ 542 ಕ್ಷೇತ್ರಗಳಲ್ಲಿನ ಖಾಲಿ ಇರುವ 920 ಸ್ಥಾನಗಳಿಗೆ ಚುನಾವಣೆ ಜರುಗಲಿದೆ.
ಧಾರವಾಡ ತಾಲೂಕಿನ 1805 ಕ್ರಮಬದ್ಧ ನಾಮಪತ್ರಗಳ ಪೈಕಿ 30 ಜನ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದು, 173 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ. ಒಟ್ಟು 1602 ಅಭ್ಯರ್ಥಿಗಳು ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆ.
ಕಲಘಟಗಿ ತಾಲೂಕಿನ 1115 ಕ್ರಮಬದ್ಧ ನಾಮಪತ್ರಗಳ ಪೈಕಿ 16 ಜನ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದು, 110 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ. ಒಟ್ಟು 989 ಅಭ್ಯರ್ಥಿಗಳು ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆ.
ಅಳ್ನಾವರ ತಾಲೂಕಿನ 176 ಕ್ರಮಬದ್ಧ ನಾಮಪತ್ರಗಳ ಪೈಕಿ ಒಬ್ಬ ಅಭ್ಯಥಿಯು ಅವಿರೋಧ ಆಯ್ಕೆಯಾಗಿದ್ದು, 19 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ. ಒಟ್ಟು 157 ಅಭ್ಯರ್ಥಿಗಳು ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆ.
ಅಂತಿಮ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳಿಗೆ ರಾಜ್ಯ ಚುನಾವಣಾ ಆಯೋಗವು ಸೂಚಿಸಿರುವ ನಿಯಮಗಳನುಸಾರ ಈಗಾಗಲೇ ಚುನಾವಣಾ ಚಿಹ್ನೆಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
Kshetra Samachara
15/12/2020 06:36 pm