ಧಾರವಾಡ: ರಾಜ್ಯ ಚುನಾವಣಾ ಆಯೋಗವು ನವೆಂಬರ್ 30 ರಂದು ನೀಡಿರುವ ವೇಳಾಪಟ್ಟಿಯಂತೆ ಧಾರವಾಡ ಜಿಲ್ಲೆಯಲ್ಲಿ ಹುಬ್ಬಳ್ಳಿ, ಕುಂದಗೋಳ, ನವಲಗುಂದ ಮತ್ತು ಅಣ್ಣಿಗೇರಿ ತಾಲ್ಲೂಕಗಳ ವಿವಿಧ ಗ್ರಾಮ ಪಂಚಾಯತಿಗಳಿಗೆ ಸಾರ್ವತ್ರಿಕ ಚುನಾವಣೆ ಜರುಗಿಸಲು ಜಿಲ್ಲಾ ಚುನಾವಣಾ ಅಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಡಿಸೆಂಬರ್ 11 (ಶುಕ್ರವಾರ) 2020 ರಂದು ಗ್ರಾಮ ಪಂಚಾಯತ ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದಾರೆ.
ಹುಬ್ಬಳ್ಳಿ, ಕುಂದಗೋಳ, ನವಲಗುಂದ ಮತ್ತು ಅಣ್ಣಿಗೇರಿ ತಾಲ್ಲೂಕುಗಳ ವಿವಿಧ 71 ಗ್ರಾಮ ಪಂಚಾಯತಿಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ಅಧಿಸೂಚನೆ ಹೊರಡಿಸುವ ಡಿಸೆಂಬರ್ 11 (ಶುಕ್ರವಾರ) 2020 ರಿಂದ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರಗಳನ್ನು ಸಲ್ಲಿಸಬಹುದು.
ನಾಮಪತ್ರಗಳನ್ನು ಸಲ್ಲಿಸಲು ಡಿಸೆಂಬರ್ 16 (ಬುಧುವಾರ) 2020 ಕೊನೆಯ ದಿನಾಂಕವಾಗಿದೆ. ನಾಮಪತ್ರಗಳ ಪರಿಶೀಲನೆ ಡಿಸೆಂಬರ್ 17 (ಗುರುವಾರ) 2020 ರಂದು ನಡೆಯಲಿದೆ. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಡಿಸೆಂಬರ್ 19 (ಶನಿವಾರ) 2020 ಕೊನೆಯ ದಿನವಾಗಿದೆ.
ಮತದಾನವು ಡಿಸೆಂಬರ್ 27 (ಭಾನುವಾರ) 2020 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಮರು ಮತದಾನ ಇದ್ದಲ್ಲಿ ಡಿಸೆಂಬರ್ 29 (ಮಂಗಳವಾರ) 2020 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನವು ನಡೆಯಲಿದೆ. ಡಿಸೆಂಬರ್ 31 (ಗುರುವಾರ) 2020 ರಂದು ಚುನಾವಣೆ ಕಾರ್ಯವು ಮುಕ್ತಾಯಗೊಳ್ಳಲಿದೆ.
ಎರಡನೇ ಹಂತದಲ್ಲಿ ಹುಬ್ಬಳ್ಳಿ ತಾಲೂಕಿನ 26 ಗ್ರಾಮ ಪಂಚಾಯಿತಿಗಳ 373 ಕ್ಷೇತ್ರಗಳಿಗೆ, ಕುಂದಗೋಳ ತಾಲೂಕಿನ 23 ಗ್ರಾಮ ಪಂಚಾಯಿತಿಗಳ 346 ಕ್ಷೇತ್ರಗಳಿಗೆ, ನವಲಗುಂದ ತಾಲೂಕಿನ 14 ಗ್ರಾಮ ಪಂಚಾಯಿತಿಗಳ 204 ಕ್ಷೇತ್ರಗಳಿಗೆ ಮತ್ತು ಅಣ್ಣಿಗೇರಿ ತಾಲೂಕಿನ 8 ಗ್ರಾಮ ಪಂಚಾಯಿತಿಗಳ 109 ಕ್ಷೇತ್ರಗಳಿಗೆ ಸಾರ್ವತ್ರಿಕ ಚುನಾವಣೆಯು ಜರುಗಲಿದೆ.
4 ತಾಲೂಕುಗಳ 71 ಗ್ರಾಮ ಪಂಚಾಯಿತಿಗಳ ಒಟ್ಟು 1032 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆಯು ಡಿಸೆಂಬರ್ 11 ರಿಂದ ಆರಂಭವಾಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಚುನಾವಣೆ ಅಧಿಸೂಚನೆ ಹೊರಡಿಸಿದ್ದಾರೆ.
Kshetra Samachara
10/12/2020 12:49 pm