ಧಾರವಾಡ: ಗ್ರಾಮ ಪಂಚಾಯ್ತಿ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೋವಿಡ್ ಮುಂಜಾಗೃತಾ ಕ್ರಮಗಳೊಂದಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಮತಗಟ್ಟೆಯನ್ನು 1400 ಮತದಾರರಿಗೆ ಬದಲಿಗೆ ಗರಿಷ್ಟ 1000 ಮತದಾರರಿಗೆ ಮಾತ್ರ ಇರುವಂತೆ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನಕ್ಕೆ ನಿಗದಿಪಡಿಸಿದ ಕೊಠಡಿಯನ್ನು ಹಾಗೂ ಅಕ್ಕಪಕ್ಕದ ಕೊಠಡಿಗಳನ್ನು ಸೋಡಿಯಂ ಹೈಪೋಕ್ಲೋರೈಡ್ (1%) ದ್ರಾವಣವನ್ನು ಸಿಂಪಡಿಸಿ ಸಿದ್ಧಗೊಳಿಸಲಾಗುವುದು.
ಮತಗಟ್ಟೆಯಲ್ಲಿ ಪ್ರಿಸೈಡಿಂಗ್ ಅಧಿಕಾರಿ, ಪೋಲಿಂಗ್ ಅಧಿಕಾರಿ ಕೂರುವ ಆಸನಗಳನ್ನು ನಿಯಮದಂತೆ ಜೋಡಿಸಿಡಬೇಕು. ಮತದಾನಕ್ಕೆ ಆಗಮಿಸುವ ಪ್ರತಿ ಮತದಾರ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.
ಮತದಾನದ ದಿನದಂದು ಮತಗಟ್ಟೆ ಅಧಿಕಾರಿಗಳು ಹಾಗೂ ಪೋಲಿಂಗ್ ಏಜೆಂಟರು ಮತದಾನದ ದಿನದಂದು ಖಡ್ಡಾಯವಾಗಿ ಫೇಸ್‌ಮಾಸ್ಕ, ಫೇಸ್ ಶೀಲ್ಡ ಮತ್ತು ಹ್ಯಾಂಡಗ್ಲೌಸ್ ಧರಿಸಿರಬೇಕು. ಕೊವೀಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು.
ಮತದಾರರು ಮತಚಲಾಯಿಸುವ ಸಂದರ್ಭದಲ್ಲಿ ಖಡ್ಡಾಯವಾಗಿ ಫೇಸ್‌ಮಾಸ್ಕ ಧರಿಸಿರಬೇಕು ಹಾಗೂ ಸರತಿ ಸಾಲಿನಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.
ಪ್ರತಿಯೊಂದು ಮತದಾನ ಕೇಂದ್ರದ ಪ್ರವೇಶದ್ವಾರದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸಿ, ಮತದಾನ ಕೊಠಡಿಗೆ ಪ್ರವೇಶಿಸುವ ವ್ಯಕ್ತಿಗಳನ್ನು ( ಮತಗಟ್ಟೆ ಸಿಬ್ಬಂದಿ ಹಾಗೂ ಏಜೆಂಟರನ್ನು ಒಳಗೊಂಡಂತೆ ) ಕೋವಿಡ್ ಕುರಿತು ಥರ್ಮಲ್ ಸ್ಕ್ಯಾನರ್ ದಿಂದ ಜ್ವರ ತಪಾಸಣೆ ಮಾಡಲಾಗುವುದು. ಹಾಗೂ ಒಳಪ್ರವೇಶಿಸುವ ವ್ಯಕ್ತಿಗಳು ಮಾಸ್ಕ್ ಧರಿಸಿರುವುದನ್ನು ಖಚಿತ ಪಡಿಸಿಕೊಳ್ಳಲಾಗುವುದು.
ಕೋವಿಡ್ ಪಾಸಿಟಿವ್ ಇರುವ ಮತದಾರರಿಗೆ ಮತದಾನ ಮಾಡಲು ಮತದಾನ ಅವಧಿಯ ಕೊನೆಯ ಒಂದು ಗಂಟೆ ಮೀಸಲಿರಿಸಲಾಗಿದ್ದು, ಅವರಿಗೆ ಎಲ್ಲ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ಮತದಾನಕ್ಕೆ ಅವಕಾಶ ಮಾಡಿ ಕೊಡಲಾಗುವುದು.
ಧಾರವಾಡ ಜಿಲ್ಲೆಯ 7 ತಾಲೂಕಿನ ಒಟ್ಟು 136 ಗ್ರಾಮ ಪಂಚಾಯತಗಳ 676 ಪ್ರಾದೇಶಿಕ ಚುನಾವಣಾ (ವಾರ್ಡ) ಕ್ಷೇತ್ರಗಳಿಗೆ 1952 ಸದಸ್ಯ ಸ್ಥಾನಗಳಿಗಾಗಿ ಸಾರ್ವತ್ರಿಕ ಚುನಾವಣೆ ಜರುಗಲಿದ್ದು, ಒಟ್ಟು 888 ಮತಗಟ್ಟೆಗಳನ್ನು ಸ್ಥಾಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪ್ರತಿ ಮತಗಟ್ಟೆಗಳಿಗೆ ಆಶಾ, ಕಿರಿಯ ಆರೋಗ್ಯ ಸಹಾಯಕರು ಸೇರಿದಂತೆ ವಿವಿಧ ಆರೋಗ್ಯ ಸಿಬ್ಬಂದಿಯನ್ನು ನೇಮಿಸಲಾಗುತ್ತಿದೆ.
Kshetra Samachara
03/12/2020 02:55 pm