ಹುಬ್ಬಳ್ಳಿ: ನವಲಗುಂದ ಕ್ಷೇತ್ರದ ಹಲವು ಹಳ್ಳಿಗಳಲ್ಲಿ ರುಧ್ರಭೂಮಿಯ ಕೊರತೆಯಿದೆ. ಕಂದಾಯ ಇಲಾಖೆಯು ವಿಶೇಷವಾಗಿ 50 ಲಕ್ಷ ರೂ. ಅನುದಾನ ಒದಗಿಸಿದ್ದು, ಕ್ಷೇತ್ರದ ಗ್ರಾಮಗಳಿಗೆ ಅಗತ್ಯ ಇರುವ ಜಮೀನು ಖರೀದಿಸಲಾಗುವುದು ಎಂದು ಮೂಲ ಸೌಕರ್ಯ ಅಭಿವೃದ್ಧಿ, ಹಣಕಾಸು ಸಂಸ್ಥೆ ಅಧ್ಯಕ್ಷ, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ.
ಕೋಳಿವಾಡ ಗ್ರಾಮದಲ್ಲಿ ಆಯೋಜಿಸಲಾದ ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೋಳಿವಾಡ ಗ್ರಾಮದಲ್ಲೂ ಹಲವು ವರ್ಷಗಳಿಂದ ರುದ್ರಭೂಮಿಯ ಸಮಸ್ಯೆ ಇತ್ತು. ಇದನ್ನು ಪರಿಹರಿಸಲು ಖಾಸಗಿಯವರಿಗೆ ಸುಮಾರು 26 ಲಕ್ಷ ರೂ. ನೀಡಿ ಜಮೀನು ಖರೀದಿಸಲಾಗಿದೆ. ಹೀಗೆ ಅಗತ್ಯ ಇರುವ ಗ್ರಾಮಗಳಲ್ಲಿ ಕೂಡ ಜಮೀನು ಖರೀದಿ ಮಾಡಲಾಗುವುದು. ಹಿಂದೆ ನೀಡಿದ ಭರವಸೆಯಂತೆ ಸವದಿತ್ತಿ ರೇಣುಕಾಮಾತೆ ಸನ್ನಿದಿಯಲ್ಲಿರುವ ಮಲಪ್ರಭಾ ಜಲಾಶಯದಿಂದ ಧಾರವಾಡ ಜಿಲ್ಲೆಯ ಎಲ್ಲಾ ಗ್ರಾಮಗಳಿಗೂ ಪೈಪ್‌ಲೈನ್ ಮುಖಾಂತರ ಸರಬರಾಜು ಮಾಡಲಾಗುವುದು. ಇದಕ್ಕಾಗಿ 1,100 ಕೋಟಿ ರೂ. ವೆಚ್ಚದ ಯೋಜನೆ ಇದಕ್ಕಾಗಿ ಸಿದ್ಧವಾಗಿದೆ. ಶೀಘ್ರದಲ್ಲಿ ಟೆಂಡರ್ ಕರೆದು, ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಕೋಳಿವಾಡ, ಮಲ್ಲಿಗವಾಡ ಸೇರಿದಂತೆ ಜಿಲ್ಲೆಯ 300 ಹೆಚ್ಚು ಹಳ್ಳಿಗಳಿಗೆ ಮಲಪ್ರಭಾ ನದಿ ನೀರು ಲಭಿಸಲಿದೆ. ಕೋಳಿವಾಡ ಗ್ರಾಮಕ್ಕೆ 1 ಕೋಟಿ ರೂ. ವಿಷೇಶ ಅನುದಾನವನ್ನು ಒಗಿಸಲಾಗಿದೆ. ಕುಮಾರವ್ಯಾಸ ಭವನ, ಕುಡಿಯುವ ನೀರಿಗೆ ಕೆರೆ ನಿರ್ಮಾಣ, ನಿರಂತರ ಜ್ಯೋತಿ, ರಸ್ತೆಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಗ್ರಾಮಸ್ಥರ ಮನವಿಯಂತೆ ಕೋಳಿವಾಡ ಉಮಚಗಿ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಇದರಂತೆ 8 ಕೋಟಿ ರೂ. ಅನುದಾನದ ಅಗತ್ಯವಿದೆ. ಇದರಲ್ಲಿ 5 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಲಾಗಿದ್ದು, ರಸ್ತೆಯ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಅಧಿಕಾರಿಗಳು ಗ್ರಾಮೀಣ ರಸ್ತೆಗಳಲ್ಲಿ ಹೆಚ್ಚಭಾರ ಹೊತ್ತು ಓಡಾಡುವ ಟ್ರಕ್‍ಗಳ ಸಂಚಾರವನ್ನು ನಿಯಂತ್ರಿಸಬೇಕು. ಕೋಳಿವಾಡ ಶಾಲೆಯ ಅಭಿವೃದ್ಧಿಗೆ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜು ಸ್ಥಾಪನೆಗೂ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಕೊರೊನಾ ಎರಡನೇ ಅಲೇ ಪ್ರಾರಂಭವಾಗಬಹುದು. ಜನರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಓಡಾಡಬೇಕು. ಗ್ರಾಮದಲ್ಲಿ ಹಸಿ ಹಾಗೂ ಒಣ ತ್ಯಾಜ್ಯ ಘಟಕಗಳನ್ನು ನಿರ್ಮಿಸಲು ಅನುನದಾನ ಬಿಡುಗಡೆ ಮಾಡಲಾಗಿದೆ. ಗ್ರಾಮದ ಜನರು ಹೋಬಳಿ, ತಾಲೂಕು, ಜಿಲ್ಲೆ ಕೇಂದ್ರಗಳಿಗೆ ವಿವಿಧ ಕಾರ್ಯಗಳಿಗಾಗಿ ಅಲೆಯುವುದನ್ನು ತಪ್ಪಿಸಲು ರಾಜ್ಯ ಸರ್ಕಾರ “ಗ್ರಾಮ ಒನ್” ಕೇಂದ್ರಗಳನ್ನು ತೆರೆಯುತ್ತಿದೆ ಎಂದರು.
Kshetra Samachara
23/11/2020 08:28 pm