ಬೆಳಗಾವಿ: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ಜೈಲು ಸೇರಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಈ ಬಾರಿಯ ದೀಪಾವಳಿ ಹಬ್ಬದ ಸಂಭ್ರಮವಂತೂ ಸಿಗಲಿಲ್ಲ. ಆದರೂ ಜೈಲಿನಿಂದಲೇ ಅವರು ಜನತೆಗೆ ಶುಭಾಶಯ ತಿಳಿಸಿದ್ದಾರೆ.
ಈ ಸಂಬಂಧ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಶನಿವಾರ ಬರೆದುಕೊಂಡಿರುವ ಅವರು, ದೀಪಾವಳಿಯ ದೀಪವು ನಮ್ಮೆಲ್ಲಾ ತೊಂದರೆಗಳನ್ನು, ಸಮಸ್ಯೆಗಳನ್ನು ಮತ್ತು ದುಃಖಗಳನ್ನು ಸುಡಲಿ. ಈ ಅದ್ಭುತ ದೀಪಾವಳಿಯಿಂದ ನಮ್ಮೆಲ್ಲರ ಜೀವನದಲ್ಲಿ ಸಂತೋಷ, ಸಂಭ್ರಮ, ಸಡಗರ ಮನೆ ಮಾಡಲಿ. ಸಮಸ್ತ ನಾಗರೀಕ ಬಂಧುಗಳಿಗೆ ನರಕ ಚತುರ್ದಶಿಯ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ವಿನಯ್ ಕುಲಕರ್ಣಿಯನ್ನು ನವೆಂಬರ್ 23ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅವರು ಈಗ ಹಿಂಡಲಗಾ ಜೈಲಿನ ಕ್ವಾರಂಟೈನ್ ಸೆಲ್‍ನಲ್ಲಿದ್ದಾರೆ.
ಇಂದು ಬೆಳಗ್ಗೆ ಜೈಲಿನ ಕ್ಯಾಂಟೀನ್‍ನಿಂದ ಇಡ್ಲಿ ತರಿಸಿಕೊಂಡು ತಿಂದಿದ್ದಾರೆ ಎಂದು ಜೈಲು ಮೂಲಗಳಿಂದ ತಿಳಿದಿದೆ. ಹಬ್ಬದ ದಿನವಾದ ಇಂದು ಮಧ್ಯಾಹ್ನದ ಊಟವನ್ನು ಜೈಲು ಸಿಬ್ಬಂದಿ ಬೆಳಗ್ಗೆ 10 ಗಂಟೆಗೆ ನೀಡಿದ್ದಾರೆ. ಹಿಂಡಲಗಾ ಜೈಲಿನಲ್ಲಿ ನಾಳೆ ದೀಪಾವಳಿಯ ವಿಶೇಷ ಪೂಜೆ ನಡೆಯಲಿದೆ. ಅದರ ಅಂಗವಾಗಿ ಕೈದಿಗಳಿಗೆ ದೀಪಾವಳಿ ನಿಮಿತ್ತ ಹಬ್ಬದೂಟದ ವ್ಯವಸ್ಥೆ ಮಾಡಲಾಗುತ್ತಿದೆ.
Kshetra Samachara
15/11/2020 12:39 pm