ಧಾರವಾಡ: ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಜನ್ಮ ದಿನವನ್ನು ಧಾರವಾಡದ ಹೋಟೆಲ್ ನಲ್ಲಿ ಕಾಂಗ್ರೆಸ್ ಮುಖಂಡರು ಕೇಕ್ ಕತ್ತರಿಸುವ ಮೂಲಕ ಆಚರಿಸಿದರು.
ಕಾಂಗ್ರೆಸ್ ಮುಖಂಡರಾದ ದೀಪಕ ಚಿಂಚೋರೆ, ಸತೀಶ್ ತುರಮರಿ, ಸಿದ್ದಣ್ಣ ಪ್ಯಾಟಿ ಸೇರಿದಂತೆ ಇನ್ನೂ ಕೆಲವರು ಕೇಕ್ ಕತ್ತರಿಸಿ ವಿನಯ್ ಅವರ ಜನ್ಮ ದಿನ ಆಚರಿಸಿದರು.
ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೀಪಕ ಚಿಂಚೋರೆ, ವಿನಯ್ ಅವರು ಎಲ್ಲವನ್ನೂ ಎದುರಿಸಿ ಗೆದ್ದು ಬರುತ್ತಾರೆ. ಮಾಧನಭಾವಿ ಹಾಗೂ ಬೋಗೂರಿನಲ್ಲಿ ಅತ್ಯಾಚಾರ ನಡೆದಿದ್ದವು. ಅವುಗಳ ಬಗ್ಗೆ ವಿಚಾರಣೆ ನಡೆಸದೇ ವಿನಯ್ ಅವರನ್ನು ಯಾವುದೇ ಮುನ್ಸೂಚನೆ ನೀಡದೇ ಬಂಧಿಸಿದ್ದು, ಖಂಡನೀಯ ಎಂದರು.
ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸದ ಕೇಂದ್ರ ಸರ್ಕಾರ ಯೋಗೀಶಗೌಡರ ಕೊಲೆ ಪ್ರಕರಣದಲ್ಲಿ ಇಷ್ಟೊಂದು ಆಸಕ್ತಿ ತೋರಿಸಿದ್ದು ಏಕೆ? ಕಲಬುರ್ಗಿ ಅವರು ಯಾರಿಗೂ ಬೇಡವಾಗಿದ್ದರೇ? ಎಂದು ಕಾಂಗ್ರೆಸ್ ಮುಖಂಡ ಸತೀಶ ತುರಮರಿ ಪ್ರಶ್ನಿಸಿದರು.
ವಿನಯ್ ಅವರ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಮುಖಂಡರು ಅವರ ಜನ್ಮ ದಿನ ಆಚರಿಸಿ, ಅವರು ಈ ಪ್ರಕರಣದಲ್ಲಿ ಯಶಸ್ವಿಯಾಗಿ ಗೆದ್ದು ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Kshetra Samachara
07/11/2020 08:55 pm