ಹುಬ್ಬಳ್ಳಿ: ಯೋಗೇಶಗೌಡ ಹತ್ಯೆ ಪ್ರಕರಣದಲ್ಲಿ ಸಿಬಿಐ ವಶಕ್ಕೆ ಪಡೆದ ವಿನಯ್ ಕುಲಕರ್ಣಿ ಅವರ ವಿಚಾರಣೆ ಮುಂದುವರೆದಿದೆ. ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಕುಲಕರ್ಣಿಗೆ ಪ್ರಶ್ನೆಗಳ ಸುರಿ ಮಳೆಗೈಯುತ್ತಿದ್ದು, ಅಂದು ಯಡಿಯೂರಪ್ಪ ಮಾಡಿದ್ದ ಶಪಥ ಇಂದು ನಿಜವಾಗಿದೆ.ಇತ್ತ ವಿನಯ್ ಕುಲಕರ್ಣಿ ಹುಟ್ಟು ಹಬ್ಬವನ್ನು ಅವರ ಅನುಪಸ್ಥಿತಿಯಲ್ಲಿ ಅಭಿಮಾನಿಗಳು ಆಚರಿಸಿ, ಜೈಕಾರ ಹಾಕಿದ್ರು.
ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಪಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸಿಬಿಐ ಅಧಿಕಾರಿಗಳು ಇಂದು ಬೆಳ್ಳೆಂಬೆಳ್ಳಗ್ಗೆ ಬೆಳಗಾವಿಯ ಹಿಂಡಲಗಾ ಜೈಲಿಗೆ ತೆರಳಿ ವಿನಯ್ ಕುಲಕರ್ಣಿಯನ್ನು ವಶಕ್ಕೆ ಪಡೆಯಿತು. ಬಳಿಕ ಬೆಳಗಾವಿಯಿಂದ ನೇರವಾಗಿ ಹುಬ್ಬಳ್ಳಿಯ ಸಿಎಆರ್ ಮೈದಾನಕ್ಕೆ ಕರೆತಂದು ಮತ್ತೆ ವಿಚಾರಣೆ ಮುಂದುವರೆಸಿದೆ. ಸಿಬಿಐ ನ ಆರು ಅಧಿಕಾರಿಗಳ ತಂಡ ವಿನಯ್ ಕುಲಕರ್ಣಿ ಹಾಗೂ ಆಪ್ತ ಕಾರ್ಯದರ್ಶಿ ಸೋಮಲಿಂಗ ನ್ಯಾಮಗೌಡ ಅವರನ್ನು ಕೂಡ ಬೆಳಿಗ್ಗೆಯಿಂದ ವಿಚಾರಣೆಗೊಳಪಡಿಸಿ ಸಾಕಷ್ಟು ಮಾಹಿತಿ ಸಂಗ್ರಹ ಮಾಡಿದೆ.ಸಿಎಆರ್ ಮೈದಾನದಲ್ಲಿ ಆಪ್ತ ಕಾರ್ಯದರ್ಶಿ ಹಾಗೂ ವಿನಯ್ ಮುಖಾಮುಖಿಯಾದ ಬಳಿಕ ಇಬ್ಬರನ್ನೂ ಪ್ರತ್ಯೇಕ ಕೊಠಡಿಯಲ್ಲಿ ಇಟ್ಟು ವಿಚಾರಣೆ ನಡೆಸಿದ್ದಾರೆ.
ಇತ್ತ ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ಅಧಿಕಾರಿಗಳ ವಿಚಾರಣೆಯನ್ನು ಎದುರಿಸುತ್ತಿದ್ದರೇ, ವಿನಯ್ ಕುಲಕರ್ಣಿ ಅವರ ಅಭಿಮಾನಿಗಳು 52 ನೇ ಹುಟ್ಟು ಹಬ್ಬವನ್ನು ಆಚರಣೆ ಮಾಡಿದ್ದಾರೆ. ಧಾರವಾಡದ ಗಾಂಧಿ ಚೌಕ್ ನ ಲಯನ್ಸ್ ಕ್ಲಬ್ ನಲ್ಲಿ ಅಭಿಮಾನಿಗಳು ರಕ್ತದಾನ ಮಾಡಿದರೆ, ಧಾರವಾಡದ ಮುರುಘಾಮಠದಲ್ಲಿ ಅನ್ನ ಸಂತರ್ಪಣೆ ಕೂಡ ಮಾಡಲಾಗಿದೆ. ಅಲ್ಲದೆ ಹುಬ್ಬಳ್ಳಿಯ ಸಿಎಆರ್ ಮೈದಾನದ ಎದುರು ವಿನಯ್ ಕುಲಕರ್ಣಿ ಅಭಿಮಾನಿಗಳು ರಸ್ತೆಯಲ್ಲೆ ಕೇಕ್ ಕತ್ತರಿಸಿ ಬರ್ತಡೇ ಸೆಲೆಬ್ರೆಷನ್ ಮಾಡಿ, ಜೈಕಾರ ಕೂಗಿದರು. ಮಧ್ಯಾಹ್ನದ ಬಳಿಕ ವಿನಯ ಪತ್ನಿ ಹಾಗೂ ಮಕ್ಕಳಿಗೆ ಸಿಎಆರ್ ಮೈದಾನದಲ್ಲಿ ಬೇಟಿಗೆ ಅಧಿಕಾರಿಗಳು ಅವಕಾಶ ನೀಡಿದ್ದರು. 10 ನಿಮಷಗಳ ಕಾಲ ಬೇಟಿಗೆ ಅವಕಾಶ ಪಡೆದಿದ್ದ ಕುಟುಂಬ ಸದಸ್ಯರು, ಸಿಎಆರ್ ಮೈದಾನದಲ್ಲಿಯೆ ಕುಟುಂಬದ ಜೊತೆಗೆ ಕೇಕ್ ಕತ್ತರಿಸಿ ಜನುಮದಿನ ಆಚರಿಸಿದ್ರು. ಹ್ಯಾಪಿ ಬರ್ತಡೆ ಅವರ್ ಹಿರೋ ಎಂದು ಕೇಕ್ ಮೇಲೆ ಬರೆಯಲಾಗಿದ್ರೆ, ಮತ್ತೊಂದೆಡೆ ಕಳೆದ ವಿಧಾನಸಭಾ ಚುನಾವಣಾ ವೇಳೆ ಪ್ರಚಾರದಲ್ಲಿ ಭಾಗಿಯಾಗಿದ್ದ ಸಿಎಂ ಯಡಿಯೂರಪ್ಪ ಸಿಎಂ ಆಗುತ್ತಿದ್ದಂತೆ ವಿನಯ್ ಕುಲಕರ್ಣಿಯನ್ನು ಜೈಲಿಗಟ್ಟುವುದಾಗಿ ಶಪಥ ಮಾಡಿದ್ದ ವಿಡಿಯೋ ಈಗ ವೈರಲ್ ಆಗಿದ್ದು, ಸಿಎಂ ಯಡಿಯೂರಪ್ಪ ನುಡಿದಂತೆ ನಡೆದಿದ್ದಾರೆ.
ಯೋಗೇಶಗೌಡ ಹತ್ಯೆಯ ಸಾಕ್ಷ್ಯನಾಶಕ್ಕೆ ಸಂಬಂಧಿಸಿದಂತೆ ಸಿಬಿಐ ಪ್ರತ್ಯೇಕ ಎಫ್‌ಐಆರ್ ದಾಖಲಿಸಿ, ಪ್ರಕರಣದ ತನಿಖೆಯನ್ನು ಮುಂದುವರೆಸಿದೆ. ನವೆಂಬರ್ 9 ರವರೆಗೆ ಸಿಬಿಐ ವಿಚಾರಣೆ ನಡೆಸಲಿದ್ದು, ಪ್ರಕರಣದ ಇಂಚಿಂಚು ಮಾಹಿತಿ ಕಲೆಹಾಕುತ್ತಿದೆ. ಈ ಸಿಬಿಐ ತನಿಖೆಯಿಂದ ವಿನಯ್ ಕುಲಕರ್ಣಿಗೆ ಮತ್ತಷ್ಟು ಸಂಕಷ್ಟ ಹೆಚ್ಚಾಗಿದ್ದು, ವಿನಯ್ ಕುಲಕರ್ಣಿ ರಾಜಕೀಯ ಭವಿಷ್ಯಕ್ಕೆ ಕುತ್ತು ತರುತ್ತಾ ಕಾದು ನೋಡಬೇಕಿದೆ.
Kshetra Samachara
07/11/2020 07:41 pm