ವಿನೋದ ಇಚ್ಚಂಗಿ ಪಬ್ಲಿಕ್ ನೆಕ್ಸ್ಟ್
ನವಲಗುಂದ : ಹಾವು ಮುಂಗುಸಿ ಸ್ನೇಹ ಮಾಡಬಹುದು, ಎಣ್ಣೆ ಸೀಗೆಕಾಯಿ ಒಂದಾಗಬಹುದು ಆದರೆ ಯಾವುದೇ ಕಾಲಕ್ಕೂ ಕಾಂಗ್ರೆಸ್ ಬಿಜೆಪಿ ಒಂದಾಗಲು ಸಾಧ್ಯವೇ ಇಲ್ಲ ಎಂಬ ಮಾತು ಜಗಜ್ಜಾಹಿರು.
ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಪ್ರಧಾನಿ ಮೋದಿ ಅವರನ್ನು ನಿತ್ಯ ಹೀಯಾಳಿಸುತ್ತಿದ್ದರೆ ಇತ್ತ ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ಸಿಗರು ನಾಯಿಗಳನ್ನು ಉದಾಹರಿಸಿ ಕಚ್ಚಾಡುತ್ತಿದ್ದಾರೆ. ಆದರೆ ಅಧಿಕಾರದ ಲಾಲಸೆ ಎಂತಹ ಬದ್ಧ ವೈರಿಗಳನ್ನೂ ಒಂದು ಮಾಡುತ್ತದೆ ಎಂಬುದಕ್ಕೆ ಇಲ್ಲಿಯ ನಗರ ಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಸಾಕ್ಷಿಯಾಯಿತು.
ಮಂಗಳವಾರ ರಾತ್ರಿವರೆಗೂ ಜೆಡಿಎಸ್ ಹಾಗೂ ಕಾಂಗ್ರೆಸ್ ಒಂದಾಗ ಬಹುದೆಂದು ನಿರೀಕ್ಷಿಸಲಾಗಿತ್ತು. ಒಂದು ವೇಳೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳದಿದ್ದರೆ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುತ್ತೇವೆ ಹೊರತು ಕೋಮುವಾದಿ ಬಿಜೆಪಿಯೊಂದಿಗೆ ಕೈಜೋಡಿಸುವುದಿಲ್ಲ ಎಂದು ಧಾರವಾಡ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ ಎದೆ ತಟ್ಟಿ ಹೇಳಿದ್ದರು.
ಆದರೆ ಆಗಿದ್ದೇನು?
ಕೆಲ ನಾಟಕೀಯ ಬೆಳವಣಿಗೆ ನಂತರ ಇದೀಗ ಅಧ್ಯಕ್ಷರಾಗಿ ಮಂಜುನಾಥ್ ಗಂಗಾಧರ್ ಜಾಧವ್ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಖೈರುನಬಿ ನಾಶಿಪುಡಿ ಅಧಿಕಾರದ ಚುಕ್ಕಾಣಿ ಹಿಡಿದರು. ನವಲಗುಂದ ಪುರಸಭೆಯಲ್ಲಿ ಒಟ್ಟು 23 ಸ್ಥಾನಗಳಿದ್ದು, ಅದರಲ್ಲಿ 6 ಬಿಜೆಪಿ, 7 ಕಾಂಗ್ರೆಸ್, 9 ಜೆಡಿಎಸ್, 1 ಪಕ್ಷೇತರ ಸದಸ್ಯರಿದ್ದು, ಬಿಜೆಪಿ ಕೈ ಎತ್ತುವ ಮೂಲಕ ಕಾಂಗ್ರೆಸ್ ಗೆ ಬೇಷರತ್ ಬೆಂಬಲ ನೀಡಿದ್ದು ಆಶ್ಚರ್ಯವುಂಟು ಮಾಡಿದೆ.
Kshetra Samachara
04/11/2020 03:50 pm