ಧಾರವಾಡ: ಸಂಘಟನೆ, ಹೋರಾಟ ಮತ್ತು ಪದವೀಧರರ ಸೇವೆಯನ್ನು ಗುರಿಯಾಗಿಸಿಕೊಂಡು ಈ ಚುನಾವಣೆ ಎದುರಿಸಿದ್ದು ಅ.28 ರಂದು ನಡೆಯಲಿರುವ ಮತದಾನದಲ್ಲಿ ಮೊದಲ ಪ್ರಾಶಸ್ತ್ಯದ ಮತ ನೀಡಿ ಬೆಂಬಲಿಸಿ ಎಂದು ಪಶ್ಚಿಮ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಮತದಾರರಲ್ಲಿ ಮನವಿ ಮಾಡಿದರು.
ಶನಿವಾರ ಹಾವೇರಿ ಸೇರಿದಂತೆ ಕ್ಷೇತ್ರದ ಹಲವೆಡೆ ಮತಯಾಚನೆ ಮಾಡಿದ ಅವರು, ಸಮಾಜವಾದಿ, ಜಾತ್ಯಾತೀತ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳ ನೆಲೆಯಲ್ಲಿ ಸುಸ್ಥಿರ ಪದವೀಧರ ಸಂಘಟನೆ ಕಟ್ಟುವ ಕನಸು ಹೊಂದಿದ್ದೇನೆ. ನನ್ನ ಕನಸಿಗೆ ತಾವು ಮತ ನೀಡುವ ಮೂಲಕ ನನಸು ಮಾಡಬೇಕು ಎಂದರು.
ಕರ್ನಾಟಕದಲ್ಲಿ ವಿಧಾನ ಪರಿಷತ್ತಿಗೆ ಒಂದು ಅನನ್ಯ ಇತಿಹಾಸವಿದೆ. ಇಲ್ಲಿ ಆಯಾ ಕ್ಷೇತ್ರದ ತಜ್ಞರನ್ನು ಆಯ್ಕೆ ಮಾಡಬೇಕೇ ಹೊರತು ರಾಜಕೀಯ ಮುಖಂಡರನ್ನು ಅಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಎನ್ನದೇ ತಮ್ಮ ಸಂಕಷ್ಟಗಳಿಗೆ ಸ್ಪಂದಿಸುವ ತಮ್ಮನ್ನು ಆಯ್ಕೆ ಮಾಡಿ ಎಂದರು.
ಪದವೀಧರರ, ಶಿಕ್ಷಕರ ಮತ್ತು ಎಲ್ಲಾ ನಿರುದ್ಯೋಗ ಪದವೀಧರರ ಹಿತ ಕಾಯುವ ಜೊತೆ ಜೊತೆಗೆ ರಾಜ್ಯ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬಲಾಡ್ಯವಾದ ಮತ್ತು ಎಲ್ಲಾ ವರ್ಗದ ಜನರನ್ನು ಒಳಗೊಳ್ಳುವ ಸುಸ್ಥಿರ ಅಭಿವೃದ್ಧಿಯ ಕರ್ನಾಟಕವನ್ನು ಕಟ್ಟಿಕೊಳ್ಳಲು ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸಲು ನಾನು ಬದ್ಧನಾಗಿದ್ದೇನೆ. ಆದರೆ, ಕಳೆದ ಎರಡ್ಮೂರು ದಶಕಗಳಿಂದ ಪದವೀಧರರ ಕ್ಷೇತ್ರದಿಂದ ಆಯ್ಕೆಯಾದ ಸದಸ್ಯರು, ಆಯ್ಕೆಗೊಂಡ ಕ್ಷೇತ್ರದ ಜನರ ಮತ್ತು ಪದವೀಧರರ ಹಿತ ಕಾಪಾಡಿದ್ದಾರೆಯೇ ಎಂಬುದನ್ನು ಈ ಸಂದರ್ಭದಲ್ಲಿ ಪ್ರಶ್ನಿಸಲೇಬೇಕು. ಈ ಕಾರಣದಿಂದಲೇ ಪದವೀಧರ ಒತ್ತಾಯದ ಮೇಲೆ ಚುನಾವಣೆ ಎದುರಿಸುತ್ತಿದ್ದೇನೆ ಎಂದರು.
ನಂತರ ಶಿಗ್ಗಾಂವ, ಸವಣೂರ, ಬ್ಯಾಡಗಿ, ಹಿರೆಕೇರೂರಿನಲ್ಲಿ ಬಸವರಾಜ ಗುರಿಕಾರ ಮಿಂಚಿನ ಪ್ರಚಾರ ಮಾಡಿದರು.
Kshetra Samachara
24/10/2020 08:29 pm