ಧಾರವಾಡ: ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಜಲಾನಯನ ಪ್ರದೇಶ ಅಭಿವೃದ್ಧಿಗಾಗಿ ಸೆಟಲೈಟ್ ಮೂಲಕ ಆಯ್ಕೆ ಮಾಡಿಕೊಂಡಿರುವ ನರೇಂದ್ರ,ಯಾದವಾಡ ಮತ್ತು ಮುಳಮುತ್ತಲ ಗ್ರಾಮಗಳ ವ್ಯಾಪ್ತಿಯಲ್ಲಿ 2022 ರಿಂದ 2027 ರವರೆಗೆ ಹಮ್ಮಿಕೊಳ್ಳುವ ಕೃಷಿ ಹಾಗೂ ಕೃಷಿ ಆಧಾರಿತ ಚಟುವಟಿಕೆಗಳಿಗೆ ಶಾಸಕ ಅಮೃತ ದೇಸಾಯಿ ಅವರು ನರೇಂದ್ರ ಗ್ರಾಮದಲ್ಲಿ ಚಾಲನೆ ನೀಡಿದರು.
ನಂತರ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೃಷಿ ಹಾಗೂ ಕೃಷಿಕರ ಅಭಿವೃದ್ಧಿಗಾಗಿ ವಿವಿಧ ರೀತಿಯ ಜನಪರ ಯೋಜನೆಗಳನ್ನು ಜಾರಿಗೊಳಿಸಿವೆ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಭೂಫಲವತ್ತತೆಯನ್ನು ಹೆಚ್ಚಿಸುವ ಮತ್ತು ಮಿತ ಪ್ರಮಾಣದಲ್ಲಿ ನೀರು ಬಳಸುವ ಮೂಲಕ ಅಂತರ್ಜಲ ಮಟ್ಟವನ್ನು ವೃದ್ಧಿಸುವ ಉದ್ದೇಶ ಹೊಂದಲಾಗಿದೆ.
ಕೃಷಿ ಜೊತೆಗೆ ಕೃಷಿಗೆ ಪೂರಕವಾದ ಪಶುಸಂಗೋಪನೆ, ಜೇನು ಸಾಕಾಣಿಕೆ, ಕೋಳಿ ಸಾಕಾಣಿಕೆ, ಹೈನುಗಾರಿಕೆ, ಮೇವು ಸಂಗ್ರಹಣೆ ಬ್ಯಾಗ್ ತಯಾರಿಕೆ, ತರಕಾರಿ ಕೀರು ಚಿಲುಗಳ ತಯಾರಿಕೆ ಮತ್ತು ರೊಟ್ಟಿ ಮಾಡುವ ಯಂತ್ರದಂತಹ ಸ್ವಉದ್ಯೋಗ ಹೆಚ್ಚಿಸುವ ಚಟುವಟಿಕೆಗಳಿಗೆ ಕೃಷಿ ಸಿಂಚಾಯಿ ಯೋಜನೆಯಲ್ಲಿ ಪ್ರಾಮುಖ್ಯತೆ ನೀಡಲಾಗಿದೆ. ಕೃಷಿ ಇಲಾಖೆಯಿಂದ ಈ ಯೋಜನೆಯಡಿ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ರೈತರು ಉತ್ತಮ ಜೀವನ ನಿರ್ವಹಿಸಬೇಕೆಂದು ಶಾಸಕರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯಿಂದ ವಿವಿಧ ಸೌಲತ್ತುಗಳನ್ನು ಪಡೆದು ಆದಾಯವನ್ನು ದ್ವಿಗುಣಗೊಳಿಸಲು ತಿಳಿಸಿದರು. ಸಾಂಕೇತಿಕವಾಗಿ ತರಕಾರಿ ಕಿರು ಚೀಲಗಳು, ಕೈತೋಟದ ಸಸಿಗಳು, ಮೇವು ಸಂಗ್ರಹಣೆಗೆ ಸೈಲೇಜ ಬ್ಯಾಗ, ಜೇನು ಸಾಕಾಣಿಕೆಗೆ ಜೇನು ಪೆಟ್ಟಿಗೆ, ಕೋಳಿ ಮರಿಗಳು, ರೊಟ್ಟಿ ಮಾಡುವ ಯಂತ್ರ ಹಾಗೂ ಹಿಂಗಾರು ಹಂಗಾಮಿನ ಬೀಜಗಳನ್ನು ಶಾಸಕರು ವಿತರಿಸಿದರು.
ಸಹಾಯಕ ಕೃಷಿ ನಿರ್ದೇಶಕಿ ಸುಷ್ಮಾ ಮಳಿಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನರೇಂದ್ರ ಗ್ರಾಮ ಪಂಚಾಯತಿ ಅಧ್ಯಕ್ಷೆ ಗಂಗಮ್ಮ ನಿರಂಜನ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ತಿರಕಯ್ಯ ಹಿರೇಮಠ, ಎ.ಪಿ.ಎಂ.ಸಿ ಮಾಜಿ ಅದ್ಯಕ್ಷ ಚನ್ನವೀರಗೌಡ ಪಾಟೀಲ, ಧಾರವಾಡ ಕೃಷಿ ಸಹಾಯಕ ನಿರ್ದೇಶಕರ ಕಚೇರಿಯ ತಾಂತ್ರಿಕ ವ್ಯವಸ್ಥಾಪಕ ಶಿವುಕುಮಾರ ಜಿ.ಬಿ., ಉಪಸ್ಥಿತರಿದ್ದರು.
Kshetra Samachara
07/10/2022 09:43 pm