ಧಾರವಾಡ: ಸಾತ್ವಿಕ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ನಟ ಶೇಖರ ಪಂಡಿತ ಬಸವರಾಜ ಮನಸೂರ ಅವರು ಬಹುಮುಖ ವಿಶಿಷ್ಟ ಸಾಧನೆಯ ವಿರಳ ಕಲಾವಿದರಾಗಿದ್ದರು ಎಂದು ಡೆಪ್ಯೂಟಿ ಚೆನ್ನಬಸಪ್ಪ ಕನ್ನಡ ವಿಕಾಸ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಡಾ.ಗುರುಮೂರ್ತಿ ಯರಗಂಬಳಿಮಠ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಟಶೇಖರ ಪಂಡಿತ ಬಸವರಾಜ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಧಾರವಾಡದ ಮುರುಘಾಮಠದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ವೈಭವ-2022 ಕಲಾ ಸಮಾವೇಶದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಂಗಭೂಮಿ ಮತ್ತು ಹಿಂದೂಸ್ತಾನಿ ಸುಗಮ ಸಂಗೀತ ಕ್ಷೇತ್ರಗಳ ಮೇರು ಕಲಾವಿದರಾಗಿದ್ದ ಪಂ.ಬಸವರಾಜ ಮನಸೂರ ಅವರ ಹೆಸರನ್ನು ಚಿರಸ್ಥಾಯಿಯಾಗಿಸುವಲ್ಲಿ ಸರ್ಕಾರ ಆದಷ್ಟು ಶೀಘ್ರವಾಗಿ ವಿಧಾಯಕ ನಿರ್ಣಯ ಕೈಕೊಳ್ಳಬೇಕೆಂದು ಅವರು ಆಗ್ರಹಿಸಿದರು.
ಹೋರಾಟಗಾರ ಮಹಾದೇವ ದೊಡಮನಿ ಹಾಗೂ ಮುರುಘಾಮಠದ ಧರ್ಮದರ್ಶಿ ಸತೀಶ ತುರಮರಿ ಮಾತನಾಡಿ, ಬಸವರಾಜ ಮನಸೂರ ಅವರ ಹಿರಿಯ ಪುತ್ರಿ ನೀಲಾಂಬಿಕಾ ಹಾಗೂ ಅವರ ಪತಿ ಶಿವಾನಂದ ಅಮರಶೆಟ್ಟಿ ಅವರು ಸತತ ಸುಮಾರು 25 ವರ್ಷಗಳಿಂದ ಬಸವರಾಜ ಮನಸೂರ ಅವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಪ್ರಶಸ್ತಿ ಪ್ರದಾನ ಹಾಗೂ ಕಲಾವಿದರ ಸಮಾವೇಶಗಳನ್ನು ಸಂಘಟಿಸುತ್ತಿದ್ದು, ಬಸವರಾಜ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗೆ ರಾಜ್ಯ ಸರ್ಕಾರ ಶಾಶ್ವತ ಅನುದಾನ ನೀಡುವ ಮೂಲಕ ಓರ್ವ ಉತ್ಕೃಷ್ಟ ಕಲಾವಿದರ ಸಾಧನಾ ಬದುಕನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದರು.
ಮುರುಘಾಮಠದ ಸೇವಾಕರ್ತರಾದ ಟಿ.ಬಿ.ಅಂಬಿಗೇರ ಉದ್ಘಾಟಿಸಿದರು. ಕಲಾವಿದರ ಸಂಘದ ಅಧ್ಯಕ್ಷ ಯಕ್ಕೇರಪ್ಪ ನಡುವಿನಮನಿ, ಖ್ಯಾತ ಜಾನಪದ ಕಲಾವಿದ ಇಮಾಮಸಾಬ್ ವಲ್ಲೆಪ್ಪನವರ, ಎನ್.ಎ. ದೇಸಾಯಿ, ಶಾಂತೇಶ ಚಿಕ್ಕಲಕಿ, ಸಂಜೀವ ಕುಂದಗೋಳ, ಎ.ಎಂ.ಸೈಯ್ಯದ್, ಮಾರ್ತಾಂಡಪ್ಪ ಕತ್ತಿ, ಗೂಳಪ್ಪ ಹಡಗಲಿ ಇದ್ದರು. ಇದೇ ಸಂದರ್ಭದಲ್ಲಿ ಕಲಾವಿದ ಪ್ರಭು ಕುಂದರಗಿ ಅವರಿಗೆ ‘ಜಾನಪದ ಜನಜನಿತ’ ಪ್ರಶಸ್ತಿ, ಸಾಧನಾ ವ್ಯಕ್ತಿತ್ವ ಪುರಸ್ಕಾರ, ಮಾತೃ ಶಕ್ತಿಶ್ರೀ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಪಂ. ಬಸವರಾಜ ಮನಸೂರ ರತ್ನ’ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
Kshetra Samachara
21/09/2022 09:27 pm