ಧಾರವಾಡ: ಜಂತುಹುಳು ಭಾದೆಯಿಂದ ರಕ್ತ ಹೀನತೆ, ಅಪೌಷ್ಠಿಕತೆ ಉಂಟಾಗಿ ಮಕ್ಕಳ ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ. ಜಂತುಹುಳು ನಾಶಕ ಅಲ್ಬಂಡೋಜೋಲ್ ಮಾತ್ರೆ ನೀಡುವುದು ಮಕ್ಕಳ ಆರೋಗ್ಯಕ್ಕೆ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ ಅವರು ಹೇಳಿದರು.
ಧಾರವಾಡದ ಶಿಕ್ಷಕಿಯರ ತರಬೇತಿ ಸಂಸ್ಥೆಯ (ಟಿಸಿಡಬ್ಲ್ಯೂ) ಆವರಣದಲ್ಲಿರುವ ಸರ್ಕಾರಿ ಮಾದರಿ ಪ್ರಾಯೋಗಿಕ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ತಾಲೂಕ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಂತು ಹುಳುವಿನಿಂದ ಮಗುವಿನಲ್ಲಿ ದೈಹಿಕ ನಿಶ್ಯಕ್ತಿ ಉಂಟಾಗಿ ಆಟ, ಪಾಠ, ಓದು ಸೇರಿದಂತೆ ಇತರೆ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಜಂತುಹುಳುಗಳ ನಿವಾರಣೆಯಿಂದ ಮಕ್ಕಳಲ್ಲಿ ವೈಯಕ್ತಿಕವಾಗಿ ರೋಗನಿರೋಧಕ ಶಕ್ತಿ, ಓದಿನಲ್ಲಿ ಏಕಾಗ್ರತೆ, ದಿನನಿತ್ಯದ ನಡುವಳಿಕೆಯಲ್ಲಿ ಸುಧಾರಣೆ ಮತ್ತು ಸಮುದಾಯದಲ್ಲಿ ಜಂತುಹುಳುವಿನ ಬಾಧೆಯ ತೊಂದರೆಯನ್ನು ತಡೆಗಟ್ಟುವಲ್ಲಿ ಸಹಾಯಕವಾಗುತ್ತದೆ. ವಿದ್ಯಾರ್ಥಿಗಳು ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ಶಾಲೆಗಳಲ್ಲಿ ಪ್ರತಿಯೊಂದು ಮಗುವಿಗೂ ತಪ್ಪದೇ ಜಂತುಹುಳು ನಿವಾರಣಾ ಮಾತ್ರೆ ಅಲ್ಬಂಡೋಜೋಲ್‌ನ್ನು ನುಂಗಿಸುವುದು ಅರೋಗ್ಯ ಇಲಾಖೆಯ ಕರ್ತವ್ಯ ಎಂದು ಅವರು ಹೇಳಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಬಿ.ಸಿ ಕರಿಗೌಡರ ಮಾತನಾಡಿ, ಜಂತುಹುಳು ನಿವಾರಣಾ ಕಾರ್ಯಕ್ರಮದ ಅಂಗವಾಗಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಜಂತುಹುಳು ನಿವಾರಣಾ ಮಾತ್ರೆ ಅಲ್ಬಂಡೋಜೋಲ್ ಅನ್ನು 1 ರಿಂದ 19 ವರ್ಷ ವಯಸ್ಸಿನ ಮಕ್ಕಳಿಗೆ ಮತ್ತು ಹದಿ ಹರೆಯದವರಿಗೆ ಮನೆಗಳಲ್ಲಿ ನೀಡಲಿದ್ದಾರೆ ಎಂದರು.
ಜಿಲ್ಲಾ ಆರ್.ಸಿ.ಎಚ್.ಓ ಅಧಿಕಾರಿ ಡಾ.ಎಸ್.ಎಂ. ಹೊನಕೇರಿ, ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ, ತಾಲೂಕ ವೈದ್ಯಾಧಿಕಾರಿ ಡಾ.ಕೆ.ಎನ್.ತನುಜಾ, ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ, ಪ್ರಾಚಾರ್ಯ ಬಿ.ಎಂ. ಬಡಿಗೇರ, ಆರೋಗ್ಯ ಶಿಕ್ಷಣಾಧಿಕಾರಿ ಬಿ.ಆರ್. ಪಾತ್ರೋಟ ಇತರರು ಇದ್ದರು.
Kshetra Samachara
10/08/2022 03:23 pm