ಧಾರವಾಡ: ಕನ್ನಡ ಅಭಿವೃದ್ಧಿ ಪ್ರಾಧಿಕಾರವು ರಾಜ್ಯಾಡಳಿತದಲ್ಲಿ ಸಂಪೂರ್ಣ ಕನ್ನಡ ಬಳಕೆಗೆ ಆದ್ಯತೆ ನೀಡಿ, ಕೇಂದ್ರ ಹಾಗೂ ಹೊರ ರಾಜ್ಯಗಳಿಂದ ಬರುವ ಪತ್ರ, ಸುತ್ತೋಲೆಗಳನ್ನು ಕನ್ನಡೀಕರಿಸಿ, ಆಡಳಿತ ನಿರ್ವಹಿಸಬೇಕು. ಶವ ಪರೀಕ್ಷಾ ವರದಿ ಕೂಡ ಕನ್ನಡದಲ್ಲೇ ಬರಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದರು.
ಧಾರವಾಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಕನ್ನಡ ಭಾಷಾ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆ ಜರುಗಿಸಿ ಅವರು ಮಾತನಾಡಿದರು.
ಎಲ್ಲ ಇಲಾಖೆಗಳು ಕನ್ನಡ ಬಳಕೆ ಮಾಡಬೇಕು. ಸರ್ಕಾರ ಮತ್ತು ಸಾರ್ವಜನಿಕರೊಂದಿಗೆ ಕನ್ನಡದಲ್ಲಿಯೇ ಪತ್ರ ವ್ಯವಹಾರ ಮಾಡಬೇಕು. ಕೇಂದ್ರೀಯ ವಿದ್ಯಾಲಯ, ಸಿಬಿಎಸ್ ಸಿ ಶಾಲೆಗಳಲ್ಲಿ ಕನ್ನಡ ಬಳಕೆಗೆ ಆದ್ಯತೆ ಸಿಗುವಂತೆ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಗಮನಹರಿಸಬೇಕೆಂದು ಅವರು ಹೇಳಿದರು.
ರಾಜ್ಯದಲ್ಲಿ ಕನ್ನಡ ಭಾಷಾ ಕಲಿಕಾ ಅಧಿನಿಯಮವಾಗಿ ಜಾರಿಯಾಗಿ ಐದು ವರ್ಷಗಳು ಕಳೆದಿವೆ. ಎಲ್ಲ ಇಲಾಖೆಗಳ ಎಲ್ಲ ಪತ್ರ ವ್ಯವಹಾರ ಕನ್ನಡದಲ್ಲಿಯೇ ಆಗಬೇಕು. ನಗರದ ಪ್ರಮುಖ ರಸ್ತೆ, ವೃತ್ತಗಳಿಗೆ ಸ್ಥಳೀಯ ನಾಯಕರ, ಹೋರಾಟಗಾರರ ಮತ್ತು ಐತಿಹಾಸಿಕ ಸ್ಥಳಗಳ ಹೆಸರು ನಾಮಕರಣ ಆಗಬೇಕು. ಕನ್ನಡ ಉಳಿಸಿ, ಬೆಳೆಸುವಲ್ಲಿ ಅಧಿಕಾರಿಗಳ ಪಾತ್ರವೂ ಮುಖ್ಯವಾಗಿದೆ ಎಂದು ಟಿ.ಎಸ್.ನಾಗಾಭರಣ ಅವರು ಹೇಳಿದರು.
ಧಾರವಾಡ ಸಾಂಸ್ಕೃತಿಕ ರಾಜಧಾನಿ, ರಾಜ್ಯದ ಅನೇಕ ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗಿದೆ. ಕನ್ನಡ ಅನುಷ್ಠಾನದಲ್ಲಿ ಧಾರವಾಡ ಮಾದರಿಯಾಗಬೇಕು. ಧಾರವಾಡ ಮಾದರಿ ಎಂದೇ ಪರಿಚಿತವಾಗಬೇಕು. ಜಾಲತಾಣಗಳು ಸಂಪೂರ್ಣ ಕನ್ನಡಮಯವಾಗಬೇಕು. ಪ್ರಾಧಿಕಾರದ ನಿರಂತರ ಪ್ರಯತ್ನದಿಂದ ಜಾಲತಾಣಗಳ ಮುಖಪುಟ ಕನ್ನಡದಲ್ಲಿ ಬರುತ್ತಿದೆ. ಅದರ ಒಳ ಹೂರಣವೂ ಕನ್ನಡಮಯವಾಗಬೇಕು ಎಂದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮಾತನಾಡಿ, ಧಾರವಾಡವು ಕನ್ನಡದ ಅಗ್ರ ನೆಲ. ಜಿಲ್ಲೆಯ ಆಡಳಿತದಲ್ಲಿ ಕನ್ನಡ ಬಳಕೆ ಆಗುತ್ತಿದೆ. ಜಿಲ್ಲಾ ಮಟ್ಟದ ಇಲಾಖೆಗಳಲ್ಲಿ ಕನ್ನಡ ಅನುಷ್ಠಾನಗೊಳಿಸಿರುವ ಬಗ್ಗೆ ಪರಿಶೀಲನೆ, ಮಾರ್ಗದರ್ಶನ ನಿರಂತರವಾಗಿ ನಡೆಯುತ್ತಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೀಡುವ ಎಲ್ಲ ಸಲಹೆ, ಸೂಚನೆಗಳನ್ನು ಪಾಲಿಸಲಾಗುತ್ತಿದೆ ಎಂದು ತಿಳಿಸಿದರು.
Kshetra Samachara
30/07/2022 06:43 pm