ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಮಹಿಳಾ ಸಶಕ್ತಿಕರಣಕ್ಕಾಗಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಡಿ ಗ್ರಾಮ ಪಂಚಾಯತ ಮಟ್ಟದಲ್ಲಿ 5049 ಸ್ವಸಹಾಯ ಸಂಘಗಳನ್ನು ಸೇರಿಸಿ, 144 ಸಂಜೀವಿನಿ ಒಕ್ಕೂಟಗಳನ್ನು ರಚಿಸಲಾಗಿದೆ. ಈ ಮೂಲಕ 62,556 ಕುಟುಂಬಗಳನ್ನು ಸ್ವಸಹಾಯ ಸಂಘಗಳ ವ್ಯಾಪ್ತಿಗೆ ಸೇರಿಸಲಾಗಿದೆ. ಸ್ವಾವಲಂಭಿ ಮಹಿಳೆಯರ ಸ್ವಸಹಾಯ ಸಂಘ ರಚಿಸಲು ಸಂಜೀವಿನಿ ಒಕ್ಕೂಟ ಒಂದು ಉತ್ತಮ ಸಂಘಟನೆಯಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ ಅವರು ಹೇಳಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಗ್ರಾಮೀಣ ಸಂಜೀವಿನಿ ಸ್ವ-ಸಹಾಯ ಸಂಘದ ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ಉದ್ಯಮ ವಿಕಾಸ ಪಾಕ್ಷಿಕ ಆಚರಣೆ ಮತ್ತು ಗ್ರಾಮೀಣ ಉದ್ಯಮಿಗಳ ಉದ್ಯಮ ಮಹತ್ವಾಕಾಂಕ್ಷಿ ಉತ್ಸವ ಅಂಗವಾಗಿ ಧಾರವಾಡ ಜಿಲ್ಲೆಯ ಸ್ವ-ಸಹಾಯ ಸಂಘದ ಮಹಿಳಾ ಉದ್ಯಮಿಗಳಿಗೆ ಆಯೋಜಿಸಿದ್ದ ಒಂದು ದಿನದ ಸರಕು ಸೇವಾ ತೆರಿಗೆ (ಜಿಎಸ್‍ಟಿ) ಹಾಗೂ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಎಫ್‍ಎಸ್‍ಎಸ್‍ಎಐ) ಕುರಿತಾಗಿ ತರಬೇತಿ ಹಾಗೂ ನೋಂದಣಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಜೀವನೋಪಾಯ ಯೋಜನೆಯಡಿ ಅನೇಕ ಕಾರ್ಯಕ್ರಮಗಳನ್ನು ಗ್ರಾಮ ಪಂಚಾಯತ ಮಟ್ಟದಲ್ಲಿ ಜಾರಿಗೊಳಿಸಲಾಗುತ್ತಿದೆ. ಸ್ವಸಹಾಯ ಸಂಘದ ಸದಸ್ಯರಾಗಿರುವ ಮಹಿಳಾ ಉದ್ಯಮಿಗಳು ಕೈಗೊಳ್ಳುತ್ತಿರುವ ಆಹಾರ ಉತ್ಪನ್ನ ಹಾಗೂ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗಾಗಿ ತರಬೇತಿ ನೀಡುವುದು ಅಗತ್ಯವಾಗಿದೆ.
ಮಹಿಳೆಯರು ಸಂಜೀವಿನಿ ಒಕ್ಕೂಟದ ಮೂಲಕ ಆಹಾರ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಯಾರಿಸುವುದರಿಂದ ಭಾರತ ಸರ್ಕಾರದ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರವು ರೂಪಿಸಿರುವ ನಿಯಮಾವಳಿಗಳನ್ನು ತಿಳಿದುಕೊಳ್ಳಬೇಕು. ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳ ಸಂಜೀವಿನಿ ಸ್ವಸಹಾಯ ಮಹಿಳಾ ಒಕ್ಕೂಟಗಳು ತಯಾರಿಸುವ ಉತ್ಪನ್ನಗಳು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿವೆ. ಮಹಿಳೆಯರು ಉದ್ಯಮಿಗಳಾಗಿ ಬೆಳೆಯುವುದರಿಂದ ಗ್ರಾಮೀಣ ಭಾಗದ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ನೀಡಬಹುದು. ಮತ್ತು ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದರೊಂದಿಗೆ ಗ್ರಾಮೀಣ ಬಡತನವನ್ನು ಹೊಗಲಾಡಿಸಬಹುದು ಎಂದು ಹೇಳಿದರು.
ಧಾರವಾಡ ಜಿಲ್ಲೆಯಲ್ಲಿ ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿ ಸೇರಿದಂತೆ ಸಂಜೀವಿನಿ ಯೋಜನೆಯಡಿ 5049 ಸ್ವಸಹಾಯ ಮಹಿಳಾ ಸಂಘಗಳನ್ನು ರಚಿಸಲಾಗಿದ್ದು, ಒಟ್ಟು ಜಿಲ್ಲೆಯ 62,556 ಕುಟುಂಬಗಳು ಸಂಜೀವಿನಿ ಯೋಜನೆಯಡಿ ಸೇರಿವೆ. ಇಷ್ಟು ದೊಡ್ಡ ಸಂಖ್ಯೆಯ ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾದರೆ ಜಿಲ್ಲೆಯ ಅಭಿವೃದ್ಧಿ, ಕೈಗಾರಿಕಾ ಚಟುವಟಿಗಳು ಹೆಚ್ಚುತ್ತವೆ. ಗ್ರಾಮೀಣ ನಿರುದ್ಯೋಗ ನಿರ್ಮೂಲನೆ ಮಾಡಲು ಮಹಿಳಾ ಸ್ವಸಹಾಯ ಸಂಘಗಳನ್ನು ತರಬೇತಿ, ಆರ್ಥಿಕ ಸಂಪನ್ಮೂಲ, ಉದ್ಯಮ ಸ್ಥಾಪನೆ ಮೂಲಕ ಸಶಕ್ತಗೊಳಿಸುವುದು ಮಹತ್ವದ್ದಾಗಿದೆ ಎಂದು ಡಾ.ಸುರೇಶ ಇಟ್ನಾಳ ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಬಿ.ಎಸ್. ಮುಗನೂರಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಧಾರವಾಡ ಜಿಲ್ಲೆಯ 144 ಗ್ರಾಮ ಪಂಚಾಯತಿಗಳಲ್ಲಿ ಒಟ್ಟು 144 ಗ್ರಾಮ ಪಂಚಾಯತ ಮಟ್ಟದ ಸಂಜೀವಿನಿ ಸ್ವಸಹಾಯ ಮಹಿಳಾ ಒಕ್ಕೂಟಗಳನ್ನು ರಚಿಸಲಾಗಿದೆ. ಇದರಲ್ಲಿ 594 ವಾರ್ಡ್‌ಮಟ್ಟದ ಸ್ವಸಹಾಯ ಸಂಘಗಳು ಸೇರಿವೆ. ಸಂಜೀವಿನಿ ಯೋಜನೆಯಡಿಯಲ್ಲಿ ಮಹಿಳಾ ಉದ್ಯಮಿಗಳನ್ನು ಬೆಳೆಸಲು ಹೆಚ್ಚು ಆಸಕ್ತಿವಹಿಸಲಾಗುತ್ತಿದೆ. ಪ್ರಮುಖ ರಾಷ್ಟ್ರೀಯ ಹಾಗೂ ಧಾರ್ಮಿಕ ಹಬ್ಬಗಳಲ್ಲಿ ಸ್ವಸಹಾಯ ಸಂಘಗಳ ಸದಸ್ಯರು ತಯಾರಿಸುವ ಆಹಾರ ಮತ್ತು ಕರಕುಶಲ, ಆಟಿಕೆ ಹಾಗೂ ಇತರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ವಿಶೇಷ ಮಾರಾಟ ಮಳಿಗೆ ಹಾಗೂ ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ. ಕಾಲಕಾಲಕ್ಕೆ ಮಹಿಳಾ ಸಂಘಗಳಿಗೆ ಅಗತ್ಯವಿರುವ ತಾಂತ್ರಿಕ ತರಬೇತಿ ಹಾಗೂ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಸಂಜೀವಿನಿ ಯೋಜನೆಯಡಿ ಆಯೋಜಿಸುವ ಮೂಲಕ ಉದ್ಯಮ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಶಾಂತಮಲ್ಲೇಶ ಹಾಗೂ ಸಹಾಯಕ ಆಯುಕ್ತ ಪಿ.ಕೆ. ಮಂಟೂರ ಮತ್ತು ಜಿಲ್ಲಾ ಅಂಕಿತ ಅಧಿಕಾರಿ ಡಾ.ರಾಜಶೇಖರ ಪಾಳೇದವರ ಅವರು ಸರಕು ಸೇವಾ ತೆರಿಗೆ (ಜಿಎಸ್‍ಟಿ) ಹಾಗೂ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರದ ವಿಷಯಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಗ್ರಾಮ ಪಂಚಾಯತ ಮಟ್ಟದ ಸಂಜೀವಿನಿ ಸ್ವಸಹಾಯ ಮಹಿಳಾ ಒಕ್ಕೂಟಗಳ ಪ್ರತಿನಿಧಿಗಳು, ಆಹಾರ ಸುರಕ್ಷತಾ ಮತ್ತು ಮಾನದಂಡಗಳ ಪ್ರಾಧಿಕಾರದ ಅಧಿಕಾರಿಗಳು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನಾ ಘಟಕದ ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
Kshetra Samachara
15/07/2022 05:41 pm