ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಆಟೊಗಳ ಬಾಡಿಗೆ ಕನಿಷ್ಠ ದರ 30 ರೂಪಾಯಿಗೆ ಏರಿಕೆ: ಅಕ್ಟೋಬರ್ 1 ರಿಂದ ಪರಿಷ್ಕೃತ ದರಪಟ್ಟಿ ಜಾರಿ

ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ರಹದಾರಿ ಹೊಂದಿರುವ ಆಟೊ ರಿಕ್ಷಾಗಳು ತನ್ನ ಪ್ರಯಾಣಿಕರಿಗೆ ವಿಧಿಸುವ ಕನಿಷ್ಠ ದರದಲ್ಲಿ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಪ್ರಯಾಣದ ಮೊದಲ 1.6 ಕಿಲೋ ಮೀಟರ್‌ವರೆಗೆ ಈಗ ಇದ್ದ ಆಟೊಗಳ ಕನಿಷ್ಠ ಬಾಡಿಗೆ ದರವನ್ನು 28 ರೂಪಾಯಿಗಳಿಂದ 30 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ಪರಿಷ್ಕೃತ ದರಗಳು ಬರುವ ಅಕ್ಟೋಬರ್ 1 ರಿಂದ ಜಾರಿಗೊಳ್ಳಲಿವೆ. ಎಲ್ಲಾ ಆಟೊ ರಿಕ್ಷಾಗಳು ಅಕ್ಟೋಬರ್ 15 ರೊಳಗೆ ಕಡ್ಡಾಯವಾಗಿ ಡಿಜಿಟಲ್ ಫೇರ್ ಮೀಟರ್ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾದ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಹಾಗೂ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2018 ರ ಅಕ್ಟೋಬರ್ ತಿಂಗಳಲ್ಲಿ ಆಟೊಗಳ ಬಾಡಿಗೆ ದರ ನಿಗದಿಪಡಿಸಲಾಗಿತ್ತು. ಪೆಟ್ರೋಲ್ ಮತ್ತು ಎಲ್‍ಪಿಜಿ ದರಗಳಲ್ಲಿ ಏರಿಕೆಯಾಗಿರುವುದರಿಂದ ಕನಿಷ್ಠ ಬಾಡಿಗೆ ದರವನ್ನು ಪರಿಷ್ಕರಿಸಲು ಕೋರಿ ಆಟೊ ರಿಕ್ಷಾ ಚಾಲಕರ ಸಂಘಗಳು ಪ್ರಾಧಿಕಾರಕ್ಕೆ ಸಲ್ಲಿಸಿದ ಮನವಿಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ ದರ ಪರಿಷ್ಕಣೆಯ ನಿರ್ಧಾರ ಪ್ರಕಟಿಸಿದರು.

ಅವಳಿ ನಗರದಲ್ಲಿ ಬಾಡಿಗೆಯ ರಹದಾರಿ ಹೊಂದಿರುವ ಆಟೊ ರಿಕ್ಷಾಗಳು ಪ್ರಯಾಣದ ಪ್ರಾರಂಭಿಕ 1.6 ಕಿಲೋ ಮೀಟರ್‌ವರೆಗೆ 30 ರೂಪಾಯಿ ಕನಿಷ್ಠ ಬಾಡಿಗೆ ದರ, ನಂತರದ ಪ್ರತಿ ಒಂದು ಕಿಲೋ ಮೀಟರ್ ದೂರಕ್ಕೆ 15 ರೂಪಾಯಿ ಹಾಗೂ ರಾತ್ರಿ 10 ರಿಂದ ಬೆಳಗಿನ 5 ಗಂಟೆಯವರೆಗೆ ಅರ್ಧಪಟ್ಟು ಹೆಚ್ಚುವರಿ ದರ ಪಡೆಯಬಹುದು. ಎಲ್ಲಾ ಆಟೊ ರಿಕ್ಷಾಗಳು ಅಕ್ಟೋಬರ್ 15 ರೊಳಗೆ ಕಡ್ಡಾಯವಾಗಿ ಡಿಜಿಟಲ್ ಫೇರ್ ಮೀಟರ್ ಅಳವಡಿಸಿಕೊಂಡು ಮೀಟರ್ ಸತ್ಯಾಪನೆ (Recaliberation) ಮಾಡಿಸಿಕೊಳ್ಳಬೇಕು.

ಕಾನೂನು ಮಾಪನ ಶಾಸ್ತ್ರ ಇಲಾಖೆಯು ಅವಳಿ ನಗರದಲ್ಲಿ ಡಿಜಿಟಲ್ ಫೇರ್ ಮೀಟರ್ ಅಳವಡಿಸುವ ಮತ್ತು ಪೂರೈಸುವ ಡೀಲರುಗಳ ಸಂಖ್ಯೆಯನ್ನು 5 ಕ್ಕೆ ಹೆಚ್ಚಿಸಿ ತ್ವರಿತ ಸೇವೆ ಒದಗಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರದ ಬಸ್, ರೈಲು ಹಾಗೂ ವಿಮಾನ ನಿಲ್ದಾಣಗಳಲ್ಲಿ ಪ್ರಿಪೇಡ್ ಆಟೊ ರಿಕ್ಷಾ ಸ್ಟ್ಯಾಂಡ್‍ಗಳನ್ನು ನಿರ್ಮಿಸಿ ಕೊಡಬೇಕು. ಅವಳಿ ನಗರದ ಎಲ್ಲ ವಲಯಗಳ ವ್ಯಾಪ್ತಿಗಳಲ್ಲಿ ಆಟೊ ರಿಕ್ಷಾ ಸ್ಟ್ಯಾಂಡ್‍ಗಳು, ಶೌಚಾಲಯಗಳನ್ನು ನಿರ್ಮಿಸಿ ಸ್ಥಳೀಯ ಆಟೊ ರಿಕ್ಷಾ ಚಾಲಕರ ಸಂಘದವರಿಗೆ ನಿರ್ವಹಣೆ ಜವಾಬ್ದಾರಿ ವಹಿಸಬೇಕೆಂದು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ ಸ್ಮಾರ್ಟ್ ಆಟೊ ಸ್ಟ್ಯಾಂಡ್‍ಗಳನ್ನು ನಿರ್ಮಿಸಿ ನಗರದ ಸೌಂದರ್ಯಿಕರಣ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಪಡಿಸಬೇಕೆಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಈಗಾಗಲೇ ನೋಂದಣಿಯಾಗಿರುವ ಭಾರತ್ ಸ್ಟೇಜ್-4 ಮಾಪನದ ವಾಹನಗಳಿಗೆ ಹಾಗೂ ಮಾಲೀಕತ್ವ ವರ್ಗಾವಣೆ ಸಂದರ್ಭದಲ್ಲಿ ರದ್ದಾಗಿರುವ ಹಳೆಯ ಆಟೊ ರಿಕ್ಷಾಗಳ ಭೌತಿಕ ಸಾಮರ್ಥ್ಯ (ಫಿಟ್‍ನೆಸ್) ಎಮಿಷನ್ ಮೊದಲಾದ ಮಾನದಂಡಗಳನ್ನು ಪರಿಶೀಲಿಸಿ ಒಂದು ಬಾರಿ ರಹದಾರಿ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಮಾತನಾಡಿ, ಬಿಎಸ್-4 ಹಾಗೂ ಮಾಲೀಕತ್ವ ವರ್ಗಾವಣೆಯಾಗಿರುವ ಆಟೊಗಳಿಗೆ ರಹದಾರಿ ನೀಡುವ ಸಂದರ್ಭದಲ್ಲಿ ಈ ಹಿಂದೆ ಪೊಲೀಸ್ ಅಥವಾ ಆರ್‌ಟಿಓ ವರದಿ ಆಧರಿಸಿ ರಹದಾರಿ ರದ್ದು ಪಡಿಸಿದ್ದರೆ ಅವುಗಳನ್ನು ಸಮರ್ಪಕವಾಗಿ ಪರಿಶೀಲಿಸಿ ಲೋಪವಾಗದಂತೆ ಎಚ್ಚರ ವಹಿಸಬೇಕು ಎಂದರು.

ಹುಬ್ಬಳ್ಳಿ ಧಾರವಾಡ ಉಪ ಪೊಲೀಸ್ ಆಯುಕ್ತ ಗೋಪಾಲ ಬ್ಯಾಕೋಡ್ ಮಾತನಾಡಿ, ಡಿಜಿಟಲ್ ಫೇರ್ ಮೀಟರ್ ಅಳವಡಿಸುವ ಡೀಲರುಗಳು ಆಟೊ ರಿಕ್ಷಾಗಳ ಮಾಲೀಕರಿಂದ ಅಧಿಕ ಶುಲ್ಕ ವಸೂಲಿ ಮಾಡಬಾರದು. ನಿಗದಿತ ದರ ಮಾತ್ರ ವಿಧಿಸಬೇಕು. ಕಾನೂನು ಮಾಪನಶಾಸ್ತ್ರ ಇಲಾಖೆ ಅಧಿಕಾರಿಗಳು ಡೀಲರುಗಳಿಗೆ ಈ ಕುರಿತು ಎಚ್ಚರಿಕೆ ನೀಡಬೇಕು ಎಂದರು.

ಆಟೊ ರಿಕ್ಷಾ ಚಾಲಕರ ಸಂಘದ ಎನ್.ಎನ್.ಇನಾಮದಾರ, ದೇವಾನಂದ ಜಗಾಪೂರ, ಬಿ.ಎ.ಮುಧೋಳ ಮತ್ತಿತರರು ಅಭೆಗೆ ಆಗಮಿಸಿ ಕಳೆದ ಮೂರ್ನಾಲ್ಕು ವರ್ಷಗಳ ಅವಧಿಯಲ್ಲಿ ಪೆಟ್ರೋಲ್ ಹಾಗೂ ಎಲ್‍ಪಿಜಿ ದರಗಳಲ್ಲಿ ಏರಿಕೆಯಾಗಿದೆ. ಕನಿಷ್ಠ ಬಾಡಿಗೆ ದರವನ್ನು ಪ್ರತಿ 2 ಕಿಲೋ ಮೀಟರ್‌ಗೆ 50 ರೂಪಾಯಿಗಳಂತೆ ನಿಗದಿಗೊಳಿಸಬೇಕು ಎಂದು ಮನವಿ ಸಲ್ಲಿಸಿದರು.

Edited By : PublicNext Desk
Kshetra Samachara

Kshetra Samachara

12/07/2022 07:57 pm

Cinque Terre

8.03 K

Cinque Terre

3

ಸಂಬಂಧಿತ ಸುದ್ದಿ