ಧಾರವಾಡ: ತಾಳೆಗರಿಗಳಲ್ಲಿ ಜೀರ್ಣಾವಸ್ಥೆಯಲ್ಲಿದ್ದ ವಚನಗಳನ್ನು ಮನೆ ಮನೆಗೆ ತೆರಳಿ ಸಂಗ್ರಹಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ಚೇತನ ಡಾ.ಫ.ಗು.ಹಳಕಟ್ಟಿ ಅವರ ಕಾರ್ಯಕ್ಕೆ ಸಮಸ್ತ ಕನ್ನಡ ನಾಡು ಕೃತಜ್ಞವಾಗಿದೆ ಎಂದು ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಹೇಳಿದರು.
ಧಾರವಾಡ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕವಿವ ಸಂಘದ ನಾಡೋಜ ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ.ಫ.ಗು.ಹಳಕಟ್ಟಿ ಜನ್ಮದಿನ "ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ" ಮೊಟ್ಟ ಮೊದಲ ರಾಜ್ಯ ಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಳೆಗರಿಗಳಲ್ಲಿ ಮಾತ್ರ ದಾಖಲಾಗಿದ್ದ ವಚನಗಳನ್ನು ಸಂಗ್ರಹಿಸಿ, ಮುದ್ರಿಸಿ ಅಮೂಲ್ಯ ವಚನಭಂಡಾರವನ್ನು ಕನ್ನಡ ನಾಡಿಗೆ ನೀಡಿ ಉಪಕರಿಸಿದ್ದಾರೆ. ವಚನ ಸಾಹಿತ್ಯದ ಆಶಯಗಳನ್ನು ಮಕ್ಕಳು, ಹೊಸಪೀಳಿಗೆಯಲ್ಲಿ ಬಿತ್ತಿ, ಬೆಳೆಸಬೇಕು ಎಂದರು.
"ವಚನ ಸಂಶೋಧನ ಪಿತಾಮಹ ಡಾ.ಫ.ಗು.ಹಳಕಟ್ಟಿ" ಕೃತಿಯನ್ನು ಬಿಡುಗಡೆಗೊಳಿಸಿದ ಸಾಹಿತಿ ಡಾ.ವೀರಣ್ಣ ರಾಜೂರ ಮಾತನಾಡಿ, ಸರ್ಕಾರ ಮೊದಲ ಬಾರಿಗೆ ವಚನ ಸಾಹಿತ್ಯ ಸಂರಕ್ಷಣಾ ದಿನದ ರಾಜ್ಯಮಟ್ಟದ ಮೊದಲ ಕಾರ್ಯಕ್ರಮ ಡಾ.ಫ.ಗು.ಹಳಕಟ್ಟಿ ಅವರ ಜನ್ಮಭೂಮಿ ಧಾರವಾಡದಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ ಎಂಬ ವಚನದ ಆಶಯದಂತೆ ಹಳಕಟ್ಟಿಯವರು ತಮ್ಮನ್ನು ತಾವು ಸವೆಸಿಕೊಂಡು ಬದುಕಿದರು. ವಚನಗಳು ಸಾಹಿತ್ಯ ಮಾತ್ರವಾಗಿಲ್ಲ ಅವು ಬದುಕೇ ಆಗಿವೆ ಎಂದರು.
ಪದ್ಮಶ್ರೀ ಪ್ರೊ.ಎಂ.ವೆಂಕಟೇಶ ಕುಮಾರ, ಜಿಲ್ಲಾ ನೇಕಾರರ ಸಂಘದ ಅಧ್ಯಕ್ಷ ಈಶ್ವರ ಕಡ್ಲಿಮಟ್ಟಿ, ಸದಾನಂದ ಹಳಕಟ್ಟಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ತಹಸೀಲ್ದಾರ ಸಂತೋಷ ಹಿರೇಮಠ ಮತ್ತಿತರರು ಇದ್ದರು.
ಪದ್ಮಶ್ರೀ ಪ್ರೊ.ಎಂ.ವೆಂಕಟೇಶ ಕುಮಾರ ಮತ್ತು ಸಂಗಡಿಗರಿಂದ ಸುಶ್ರಾವ್ಯವಾಗಿವಚನ ಗಾಯನ ಜರುಗಿತು. ವಿದುಷಿ ಸವಿತಾ ಹೆಗಡೆ ಮತ್ತು ತಂಡದವರ ವಚನ ನೃತ್ಯ ಮನೋಹರವಾಗಿ ಮೂಡಿಬಂತು.
Kshetra Samachara
02/07/2022 01:36 pm