ಧಾರವಾಡ: ವಿಕೋಪ ನಿರ್ವಹಣೆ ಯೋಜನೆಯನ್ನು ಪ್ರಾಯೋಗಿಕ ಅನುಭವದ ಆಧಾರದಲ್ಲಿ ಪರಿಷ್ಕರಿಸಲು, ತರಬೇತಿಗಳು ಅತ್ಯಂತ ಸಹಕಾರಿಯಾಗುತ್ತವೆ. ವಿಕೋಪದ ನಿಯಂತ್ರಣ, ನಿರ್ವಹಣೆ ಹಾಗೂ ಪುನರ್ವಸತಿ ಕಾರ್ಯಗಳಿಗೆ ಸ್ಪಷ್ಟ ಯೋಜನೆ ಹೊಂದಿರಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು.
ಧಾರವಾಡ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ವಿಕೋಪ ನಿರ್ವಹಣಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿರುವ ಜಿಲ್ಲಾ ವಿಕೋಪ ನಿರ್ವಹಣೆ ಯೋಜನೆ ಪರಿಷ್ಕರಣೆಯ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿಕೋಪ ನಿರ್ವಹಣೆಗೆ ಆಡಳಿತ ವ್ಯವಸ್ಥೆ ಸದಾ ಸನ್ನದ್ಧವಾಗಿರಬೇಕು. ಈ ಹಿಂದೆ ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಖಾನಾಪುರ ತಾಲ್ಲೂಕಿನಲ್ಲಿ 300 ಮಿ.ಮೀ.ಗಿಂತ ಅಧಿಕ ಮಳೆ ಸುರಿದಾಗ ಮಲಪ್ರಭಾ ನದಿಯಲ್ಲಿ ಉಂಟಾದ ಪ್ರವಾಹದಿಂದ ರಾಮದುರ್ಗ ತಾಲೂಕಿನಲ್ಲಿ ದೊಡ್ಡ ಪ್ರಮಾಣದ ನೀರು ನುಗ್ಗಿ ಬಂತು. ಅನೇಕ ಗ್ರಾಮಗಳ ಜನರನ್ನು ರಾತ್ರೋರಾತ್ರಿ ಸ್ಥಳಾಂತರ ಮಾಡಬೇಕಾಯಿತು. ಅನೇಕ ಪ್ರಯತ್ನಗಳ ಮಧ್ಯೆಯೂ ಸುಮಾರು 72 ಜನರು ಗ್ರಾಮದಿಂದ ಹೊರಬರದೇ ಸಂಕಷ್ಟಕ್ಕೆ ಸಿಲುಕಿದರು. ಆ ಜನರನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಿದ ಸಂದರ್ಭದಲ್ಲಿ ಎದುರಿಸಿದ ಆತಂಕ, ಅಧಿಕಾರಿಗಳು, ಸಿಬ್ಬಂದಿ, ಚುನಾಯಿತ ಪ್ರತಿನಿಧಿಗಳು, ಸ್ಥಳೀಯ ಪರಿಣಿತರು ನೀಡಿದ ಸಹಕಾರ ದೊಡ್ಡದಾಗಿತ್ತು. ವಿಕೋಪದ ನಿಯಂತ್ರಣ, ನಿರ್ವಹಣೆ ಹಾಗೂ ಪುನರ್ವಸತಿ ಕಾರ್ಯಗಳು ಮುಖ್ಯವಾಗಿರುತ್ತವೆ ಎಂದರು.
ಎಟಿಐನ ವಿಕೋಪ ನಿರ್ವಹಣಾ ಕೇಂದ್ರದ ಸಂಪನ್ಮೂಲ ವ್ಯಕ್ತಿ ಡಾ.ಚಂದ್ರನಾಯಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಸಿ.ಕರಿಗೌಡರ,ಡಾ.ಶಿವಕುಮಾರ,ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯೆ ಕವಿತಾ ಅಂಗಡಿ, ಜಿಲ್ಲಾಧಿಕಾರಿಗಳ ಕಚೇರಿಯ ವಿಕೋಪ ನಿರ್ವಹಣೆ ವಿಭಾಗದ ಸಂಯೋಜಕ ಪ್ರಕಾಶ ವೈ.ಹೆಚ್.ಮತ್ತಿತರರು ಇದ್ದರು.
ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
Kshetra Samachara
29/06/2022 10:23 pm