ಧಾರವಾಡ: ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ಮಾದರಿ ಆಡಳಿತಗಾರರಾಗಿದ್ದರು. ಬೆಂಗಳೂರು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳವಣಿಗೆಯಾಗಲು ಮೂಲ ಕಾರಣ ನಾಡಪ್ರಭು ಕೆಂಪೇಗೌಡರ ದೂರದೃಷ್ಠಿ ಮತ್ತು ಅವರ ಕೊಡುಗೆಯಾಗಿದೆ ಎಂದು ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಹೇಳಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಅವರು ಮಾತನಾಡಿ, ಬೆಂಗಳೂರಿನ ಪರಿಸರ, ಬಡಾವಣೆಗಳು, ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಕೆಂಪೇಗೌಡರು ಅನೇಕ ವರ್ಷಗಳ ಹಿಂದೆ ನೀಡಿದ ಕೊಡುಗೆ ಅಪಾರವಾಗಿದೆ. ಜನಪರ ಆಡಳಿತ ನೀಡಿದ ಕೆಂಪೇಗೌಡರು ಬೆಂಗಳೂರಿನ ಬೆಳವಣಿಗೆ ಮತ್ತು ಕೀರ್ತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ರಾಯಾಪುರದ ಜಿ.ಟಿ.ಟಿ.ಸಿ ಕಾಲೇಜಿನ ಉಪನ್ಯಾಸಕ ಶಂಕರ ಎಂ. ಗೌಡ ಅವರು ನಾಡಪ್ರಭು ಕೆಂಪೇಗೌಡರ ಜೀವನ, ಸಾಧನೆ ಹಾಗೂ ಸಾಮಾಜಿಕ ಕೊಡುಗೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಒಕ್ಕಲಿಗ ಸಂಘದ ಅಧ್ಯಕ್ಷ ರತ್ನಾಕರ ಗೌಡ, ಒಕ್ಕಲಿಗರ ಸಂಘದ ಉಪಾಧ್ಯಕ್ಷ ಕೆ.ಪಿ. ರಾಘವೇಂದ್ರ, ಕರ್ನಾಟಕ ನೃತ್ಯ ಅಕಾಡೆಮಿಯ ಸದಸ್ಯ ಹಾಗೂ ಕಲಕೇರಿ ಸಂಗೀತ ಶಾಲೆಯ ಪ್ರಾಂಶುಪಾಲ ವೀರಣ್ಣ ಪತ್ತಾರ, ಶಿಕ್ಷಕ ಧನಂಜಯ ಹಾಗೂ ಸಾರ್ವಜನಿಕರು, ಶಾಲಾಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Kshetra Samachara
27/06/2022 10:39 pm