ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ 152 ಪದವಿ ಕಾಲೇಜುಗಳ ಪೈಕಿ ಜೆಎಸ್‌ಎಸ್ ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯಕ್ಕೆ ಮಾತ್ರ ನ್ಯಾಕ್‌ನಿಂದ ‘ಎ’ ಪ್ಲಸ್ ಗ್ರೇಡ್ ಪಡೆದಿದೆ ಎಂದು ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ನ. ವಜ್ರಕುಮಾರ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡದ 2016 ರಿಂದ 2021 ರವರೆಗೆ ಸಲ್ಲಿಸಿದ ಸ್ವಯಂ ಮೌಲ್ಯಮಾಪನ ವರದಿಯನ್ನಾಧರಿಸಿ, ರಾಷ್ಟ್ರೀಯ ಮೌಲ್ಯಾಂಕನ ಮತ್ತು ಗುಣಮಟ್ಟ ಸಂಸ್ಥೆಯು (ನ್ಯಾಕ್) ಮೌಲ್ಯಮಾಪನ ಮಾಡಿ ‘ಎ’ಪ್ಲಸ್ ಗ್ರೇಡ್ ನೀಡಿದೆ. ಕಳೆದ ಮೂರು ಬಾರಿ ಮಹಾವಿದ್ಯಾಲಯವು ಸತತವಾಗಿ ‘ಎ’ ಗ್ರೇಡ್ ಪಡೆಯುತ್ತ ಬಂದಿದ್ದು, ಇದೀಗ ನಾಲ್ಕನೇ ಬಾರಿ ಅದಕ್ಕಿಂತ ಹೆಚ್ಚಿನ ‘ಎ’ ಪ್ಲಸ್ ಗ್ರೇಡನ್ನು ಸಿಜಿಪಿಎ- 3.34 ಗಳೊಂದಿಗೆ ಪಡೆದು ಗುಣಮಟ್ಟವನ್ನು ಉತ್ತಮಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದರು.
ರಾಷ್ಟ್ರೀಯ ಮೌಲ್ಯಾಂಕನ ಮತ್ತು ಗುಣಮಟ್ಟ (ನ್ಯಾಕ್) ಸಂಸ್ಥೆಯು ಮೂರು ಜನರ ಸಮಿತಿಯನ್ನು ರಚಿಸಿ ಮಹಾವಿದ್ಯಾಲಯಕ್ಕೆ ಜೂ. 13 ಮತ್ತು ಜೂ. 14 ರಂದು ಪರಿಶೀಲನೆಗಾಗಿ ಕಳುಹಿಸಲಾಗಿತ್ತು. ಸಮಿತಿಯ ಚೇರಮನ್ ಇಂಫಾಲ್ (ಮಣಿಪುರ)ನ ಐಐಐಟಿ ನಿರ್ದೇಶಕ ಪ್ರೊ. ಕೃಷ್ಣನ್ ಭಾಸ್ಕರ, ಸಂಯೋಜಕ ಸದಸ್ಯ ಆಸ್ಸಾಂನ ಬೋಡೊಲ್ಯಾಂಡ ವಿಶ್ವವಿದ್ಯಾಲಯದ ಪ್ರೊ.ಎಲಿಂಗಬಾಮ್ ನಿಕ್ಸಾನ್ ಸಿಂಗ್ ಹಾಗೂ ಸದಸ್ಯ ಪಂಜಾಬಿನ ಹೋಷಿಯಾರ್‌ಪುರದ ಸನಾತನ ಧರ್ಮ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ನಂದ ಕಿಶೋರ ಭೇಟಿ ನೀಡಿ, ಪರಿಶೀಲಿಸಿತ್ತು. ಈ ಸಮಿತಿಯ ವರದಿ ಅನ್ವಯ ಈಗ ಗ್ರೇಡ್ ಲಭಿಸಿದೆ ಎಂದರು.
Kshetra Samachara
23/06/2022 08:05 pm