ಧಾರವಾಡ: ಧಾರವಾಡ ಜಿಲ್ಲೆಯ ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡಚನೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಜಿಲ್ಲೆಯ ಎಲ್ಲ ಸಹಕಾರಿ ಸಂಘಗಳಿಗೆ ಬೀಜ, ರಸಗೊಬ್ಬರ ಮಾರಾಟಕ್ಕೆ ಪರವಾನಿಗೆ ನೀಡಿ, ಸಹಕಾರಿ ವ್ಯವಸ್ಥೆಯನ್ನು ಪ್ರೋತ್ಸಾಹಿಸುವ ಮೂಲಕ ರೈತರಿಗೆ ಸ್ಥಳೀಯವಾಗಿ ಬೀಜ, ರಸಗೊಬ್ಬರ ದೊರೆಯುವಂತೆ ಮಾಡಬೇಕೆಂದು ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆಚರ್ ಹಾಲಪ್ಪ ಹೇಳಿದರು.
ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು ಆದರೆ ಜೂನ್ ತಿಂಗಳಲ್ಲಿ ಕಳೆದ ಸಾಲಿನ ಜೂನ್‍ಗಿಂತ ಶೇ. 23 ರಷ್ಟು ಕಡಿಮೆ ಮಳೆಯಾಗಿದೆ. ಇಲ್ಲಿಯವರೆಗೆ ಶೇ.80 ರಷ್ಟು ಕೃಷಿ ಭೂಮಿ ಬಿತ್ತನೆಯಾಗಿದೆ, ಮೆಕ್ಕೆಜೋಳ, ಹತ್ತಿ ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ. ಪ್ರಸಕ್ತ ಸಾಲಿನಲ್ಲಿ ಹತ್ತಿ ಬಿತ್ತನೆ ಕಡಿಮೆಯಾಗಿದ್ದು ಉದ್ದು ಬಿತ್ತನೆ ಹೆಚ್ಚಾಗಿದೆ. ಇಲ್ಲಿಯವರೆಗೆ ವಿವಿಧ ರೀತಿಯ 14,900 ಕ್ವಿಂಟಲ್ ಬೀಜ ಮಾರಾಟವಾಗಿದ್ದು, 6,900 ಕ್ವಿಂಟಲ್ ಬೀಜದ ದಾಸ್ತಾನಿದೆ. 11,708 ಕ್ವಿಂಟಲ್ ಯೂರಿಯಾ ಮತ್ತು 12,392 ಕ್ವಿಂಟಲ್ ಡಿಎಪಿ ರಸಗೊಬ್ಬರ ಮಾರಾಟವಾಗಿದ್ದು, ಅಗತ್ಯವಿರುವ ರಸಗೊಬ್ಬರದ ದಾಸ್ತಾನು ಜಿಲ್ಲೆಯಲ್ಲಿ ಲಭ್ಯವಿದೆ ಎಂದು ಅವರು ಹೇಳಿದರು.
ಆರೋಗ್ಯ ಇಲಾಖೆಯವರು ಮಕ್ಕಳ ಲಸಿಕಾಕರಣ ಪರಿಣಾಮಕಾರಿಯಾಗಿ ಮಾಡಿ, ನಿಗದಿತ ಗುರಿ ಸಾಧಿಸಬೇಕು. ಜಿಲ್ಲೆಯಲ್ಲಿ ಬೂಸ್ಟರ್ ಡೋಸ್ ಕೊರತೆಯಾಗದಂತೆ ಜಾಗೃತಿ ವಹಿಸಬೇಕು. ಕೋವಿಡ್ ಸಮರ್ಥವಾಗಿ ಎದುರಿಸಲು ತಾಲೂಕಾ ಕೇಂದ್ರ ಹಾಗೂ ಜಿಲ್ಲಾ ಕೇಂದ್ರಲ್ಲಿ ಅಗತ್ಯವಿರುವ ಬೆಡ್, ಆಕ್ಸಿಜನ್, ಅಂಬುಲೆನ್ಸ್ ಸೇರಿದಂತೆ ಅಗತ್ಯ ವೈದ್ಯಕೀಯ ಸೌಕರ್ಯಗಳ ಸಿದ್ಧತೆಯನ್ನು ಮಾಡಿಕೊಳ್ಳಬೇಕೆಂದು ಅವರು ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಕ್ಕಳಿಗೆ ಕ್ಷೀರಭಾಗ್ಯ ಮತ್ತು ಸೃಷ್ಟಿ ಯೋಜನೆಯನ್ನು ವಿಸ್ತರಿಸಲಾಗಿದ್ದು, ಜಿಲ್ಲೆಯ ಎಲ್ಲ ಅಂಗನವಾಡಿ ಮಕ್ಕಳಿಗೆ ಹಾಲು, ಮೊಟ್ಟೆ ಸಕಾಲಕ್ಕೆ ಸಿಗುವಂತೆ ಮಾಡಬೇಕು. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಅನೇಕ ಯೋಜನೆಗಳನ್ನು ಅನುಷ್ಠಾನಗೊಳ್ಳಿಸಲಾಗಿದ್ದು ಅರ್ಹರಿಗೆ ಸಮರ್ಪಕವಾಗಿ ತಲುಪಿಸುವಂತೆ ಸಚಿವರು ಸೂಚಿಸಿದರು.
ಪಿಆರ್‌ಇಡಿ ಸೇರಿದಂತೆ ಕೆಲವು ಇಲಾಖೆಗಳು ಕಾಮಗಾರಿಗಳ ಪ್ರಸ್ತಾವಣೆ ಹಾಗೂ ಅನುಮೋದಿತ ಕ್ರೀಯಾಯೋಜನೆಗಳನ್ನು ಜಾರಿ ಮಾಡುವಲ್ಲಿ ವಿಳಂಬ ಮಾಡುತ್ತಿರುವುದು ಕಂಡುಬರುತ್ತಿದೆ. ಅಧಿಕಾರಿಗಳು ಈ ಕುರಿತು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಮತ್ತು ಸಕಾಲಕ್ಕೆ ಯೋಜನೆಗಳನ್ನು ಪೂರ್ಣಗೊಳಿಸಬೇಕೆಂದು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬೈಪಾಸ್ ಅಗಲೀಕರಣ ಕುರಿತು ಕಾಳಜಿ ಪೂರ್ವಕವಾಗಿ ಕೆಲಸಮಾಡಬೇಕು. ಅನುಮತಿ ನೀಡಿ 5 ತಿಂಗಳು ಕಳೆದರು ನಿಧಾನಗತಿಯಲ್ಲಿ ಆಗುತ್ತಿರುವುದು ಸರಿಯಲ್ಲ. ಈ ತಿಂಗಳ ಅಂತ್ಯದೊಳಗೆ ಸರ್ವೆ ಕಾರ್ಯ, ಭೂಸ್ವಾದೀನ ಕಾರ್ಯ ಪೂರ್ಣಗೊಳಿಸಿ, ಕೆಲಸ ಪ್ರಾರಂಭಿಸುವಂತೆ ಸಚಿವರು ನಿರ್ದೇಶಿಸಿದರು.
ಕಿಮ್ಸ್ ಆಸ್ಪತ್ರೆ ಉತ್ತರ ಕರ್ನಾಟಕ ಜನರ ಆಶಾಕಿರಣ. ಕಿಮ್ಸ್ ಅಭಿವೃದ್ಧಿಗೆ ಮತ್ತು ಅಗತ್ಯವಿರುವ ಮೂಲ ಸೌಕರ್ಯಗಳನ್ನು ಪೂರೈಸಲು ಸರ್ಕಾರ ಸಿದ್ಧವಿದೆ. ಈಗಾಗಲೇ ಕಿಮ್ಸ್ ಬೇಡಿಕೆಯಂತೆ ಸುಮಾರು 702 ನರ್ಸ್ ಹಾಗೂ ಡಿ ಗ್ರೂಪ್ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳು ಅನುಮತಿ ನೀಡಿದೆ. ಕೋವಿಡ್ ಸಂದರ್ಭದಲ್ಲಿ ಅನೇಕ ರೀತಿಯ ತಾಂತ್ರಿಕ ಹಾಗೂ ಉನ್ನತಿಕರಿಸಲಾದ ವೈದ್ಯಕೀಯ ಪರಿಕರಗಳನ್ನು ಕಿಮ್ಸ್ ಆಸ್ಪತ್ರಗೆ ನೀಡಲಾಗದೆ. ಇವುಗಳ ಸಮರ್ಪಕ ಬಳಕೆ ಆಗಬೇಕು.
ಕಿಮ್ಸ್ ನಿರ್ದೇಶಕರು ಜವಾಬ್ದಾರಿಗಳನ್ನು ಇತರ ವೈದ್ಯ ಅಧಿಕಾರಿಗಳಿಗೆ ಹಂಚುವ ಮೂಲಕ ಹೊಣೆಗಾರಿಕೆಯನ್ನು ಎಲ್ಲರಿಗೂ ಪಿಕ್ಸ್ ಮಾಡಬೇಕು. ತಾವು ಹಾರ್ಡ್ ಆದರೆ ಮಾತ್ರ ಗುಡ್ ಅಡ್ಮಿನಿಸ್ಟ್ರೇಟರ್ ಆಗಲು ಸಾಧ್ಯ. ಎಲ್ಲರಿಗೂ ಒಳ್ಳೆಯವರಾದರೆ ಉತ್ತಮ ಆಡಳಿತ ನೀಡುವುದು ಕಷ್ಟ ಎಂದು ಕಿಮ್ಸ್ ನಿರ್ದೇಶಕರನ್ನು ಉದ್ದೇಶಿಸಿ, ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ಕೈಮಗ್ಗ ಮತ್ತು ಜವಳಿ ಇಲಾಖೆ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರ ಬ.ಪಾಟೀಲ ಮುನೇನಕೊಪ್ಪ ಅವರು ಮಾತನಾಡಿ, ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಿಗೆ ವಿದ್ಯುತ್ ಸಂಪರ್ಕದ ಕೊರತೆಯಿದ್ದು ಪದವಿ ಪೂರ್ವ ಇಲಾಖೆಯವರು ಸಮಸ್ಯೆಯನ್ನು ಬಗೆಹರಿಸಬೇಕು ಮತ್ತು ಸರ್ಕಾರಿ ಯೋಜನೆಗಳನ್ನು ಅನುಷ್ಠಾಗೊಳಿಸುವಾಗ ಕ್ಷೇತ್ರದ ಶಾಸಕರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕೆಂದು ಹೇಳಿದರು.
ಶಾಸಕ ಅಮೃತ ದೇಸಾಯಿ ಅವರು ಮಾತನಾಡಿ, ವಿವಿಧ ಯೋಜನೆಗಳಡಿ ಅನುಮೋದಿತ ಕ್ರೀಯಾಯೋಜನೆ ಅನುಸಾರ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು. ಕಳೆದ ವರ್ಷ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಅತಿ ಮಳೆಯಾದರೆ ರೈತರಿಂದ ಯೂರಿಯಾ ರಸಗೊಬ್ಬರದ ಬೇಡಿಕೆ ಹೆಚ್ಚುತ್ತದೆ ಆದರಿಂದ ಕೃಷಿ ಇಲಾಖೆ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕೆಂದು ಹೇಳಿದರು.
ಶಾಸಕ ಅಬ್ಬಯ್ಯ ಪ್ರಸಾದ ಅವರು ಮಾತನಾಡಿ, ಸ್ಮಾರ್ಟ್‍ಸಿಟಿ ಯೋಜನೆಯಡಿ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಕಾಮಗಾರಿಗಳ ಬದಲಾವಣೆ ಇದ್ದಲ್ಲಿ ಸ್ಥಳೀಯ ಶಾಸಕರ ಗಮನಕ್ಕೆ ತರಬೇಕೆಂದು ಹೇಳಿದರು.
ಡಿಸಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ, ಮಹಾನಗರ ಪೊಲೀಸ್ ಆಯುಕ್ತ ಲಾಬೂರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ಮಾತನಾಡಿದರು.
ಸಭೆಯಲ್ಲಿ ಕೃಷಿ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪಿಆರ್‌ಇಡಿ, ಗಣಿ ಮತ್ತು ಭೂವಿಜ್ಞಾನ, ಆರೋಗ್ಯ, ಸಾರ್ವಜನಿಕ ಶಿಕ್ಷಣ, ಲೋಕೋಪಯೋಗಿ, ಪದವಿ ಪೂರ್ವ ಶಿಕ್ಷಣ, ಜಿಲ್ಲಾ ಪಂಚಾಯತ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಗತಿ ವರದಿಯನ್ನು ಮಂಡಿಸಿದರು.
Kshetra Samachara
21/06/2022 07:36 pm