ಧಾರವಾಡ: ಕೋವಿಡ್ ಸಂದಿಗ್ಧ ಪರಿಸ್ಥಿತಿ ಹಾಗೂ ಪ್ರಕೃತಿ ವೈರುಧ್ಯದ ಕಾರಣ ಕುಂಠಿತಗೊಂಡ ಆರ್ಥಿಕ ವ್ಯವಸ್ಥೆಯ ನಡುವೆಯೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು 10.53 ಪ್ರತಿಶತ ಪ್ರಗತಿ ದರದಲ್ಲಿ 30748 ಕೋಟಿ ರೂಪಾಯಿ ಒಟ್ಟಾರೆ ವಹಿವಾಟು ದಾಖಲಿಸಿದೆ ಮತ್ತು ಬ್ಯಾಂಕಿನ ಕಾರ್ಯನಿರ್ವಹಣಾ ಲಾಭ 125 ಕೋಟಿ ರೂಪಾಯಿಗಳಿಂದ 330 ಕೋಟಿ ರೂಪಾಯಿಗಳಿಗೆ ವೃದ್ಧಿಸಿದೆ ಎಂದು ಕೆವಿಜಿ ಬ್ಯಾಂಕಿನ ಅಧ್ಯಕ್ಷ ಪಿ.ಗೋಪಿಕೃಷ್ಣ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ಉಪಬಂಧಗಳನ್ನು ಪಾವತಿಸಿಯೂ ಬ್ಯಾಂಕು 31.90 ಕೋಟಿ ರೂಪಾಯಿ ಲಾಭಗಳಿಸುವಲ್ಲಿ ಶಕ್ತವಾಗಿದೆ. ಆ ಮೂಲಕ ಬ್ಯಾಂಕಿನ ನಿವ್ವಳ ಸಂಪತ್ತು 1224.42 ಕೋಟಿ ರೂಪಾಯಿಗಳಿಗೆ
ವೃದ್ಧಿಸಿದೆ ಎಂದು ತಿಳಿಸಿದರು.
ಪ್ರಗತಿ ವಿವರಿಸಿ ಮಾತನಾಡಿದ ಪಿ.ಗೋಪಿಕೃಷ್ಣ, ಠೇವಣಿ ಸಂಗ್ರಹಣೆಯಲ್ಲಿ ಶೇ 9.60. ಪ್ರತಿಶತ ಪ್ರಗತಿ ದರದಲ್ಲಿ 17647 ಕೋಟಿ ರೂಪಾಯಿ ಮಟ್ಟವನ್ನು ತಲುಪಿರುವ ಬ್ಯಾಂಕು 2021-2022 ರ ಸಾಲಿನಲ್ಲಿ ವಿವಿಧ ರಂಗಗಳಿಗೆ ಸಂಬಂಧಿಸಿ 8825 ಕೋಟಿ ರೂಪಾಯಿ ಸಾಲ ವಿತರಿಸಿದೆ. ಬ್ಯಾಂಕಿನ ಸಾಲ ಹಾಗೂ ಮುಂಗಡಗಳು ಶೇ. 11.80 ಪ್ರಗತಿ ದರದಲ್ಲಿ 13101 ಕೋಟಿ ರೂಪಾಯಿ ಮಟ್ಟವನ್ನು ತಲುಪಿದೆ. ನಿಕ್ಕಿ ಅನುತ್ಪಾದಕ ಸಾಲವನ್ನು ಶೇ 9.66 ಪ್ರತಿಶತದಿಂದ 5.90 ಪ್ರತಿಶತಕ್ಕೆ ತಗ್ಗಿಸಲಾಗಿದೆ ಬ್ಯಾಂಕಿನ ಕಾರ್ಯ ನಿರ್ವಹಣಾ ಲಾಭ ಶೇ 164.40
ಪ್ರಗತಿದರದಲ್ಲಿ 124.90 ಕೋಟಿ ರೂಪಾಯಿಗಳಿಂದ 330.19 ಕೋಟಿ ರೂಪಾಯಿಗಳಿಗೆ ವೃದ್ಧಿಸಿದೆ ಎಂದರು.
ಬ್ಯಾಂಕಿನ ಒಟ್ಟು ಆದಾಯವು 1589.53 ಕೋಟಿ ರೂಪಾಯಿಗಳಿಂದ 1991.16 ಕೋಟಿಗೆ ಏರಿಕೆಯಾಗಿದೆ. 2022-2023 ರ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ಬ್ಯಾಂಕು 18900 ಕೋಟಿ ರೂಪಾಯಿ ಠೇವಣಿ ಮತ್ತು 14100 ಕೋಟಿ ರೂಪಾಯಿ ಮುಂಗಡ ಮಟ್ಟವನ್ನು ತಲುಪುವ ಮೂಲಕ 33000 ಕೋಟಿ ರೂಪಾಯಿ ವಹಿವಾಟು ಸಾಧಿಸುವ ಮತ್ತು ಒಂಬತ್ತು ಜಿಲ್ಲೆಗಳ ಕಾರ್ಯಕ್ಷೇತ್ರದಲ್ಲಿ 9150 ಕೋಟಿ ರೂಪಾಯಿ ಸಾಲ ವಿತರಿಸುವ ಮಹತ್ವಾಕಾಂಕ್ಷಿ ಗುರಿಯನ್ನು ಗೋಪಿಕೃಷ್ಣ ಪ್ರಕಟಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಮಹಾ ಪ್ರಬಂಧಕರುಗಳಾದ ಚಂದ್ರಶೇಖರ ಡಿ ಮೊರೋ, ಶ್ರೀನಿವಾಸ ರಾವ್, ಬಿ.ಸಿ.ರವಿಚಂದ್ರ, ಸತೀಶ ಆರ್.ಮಾಲಕಿ, ಪುನೀತ, ಮಾರುಕಟ್ಟೆ ಮುಖ್ಯ ಪ್ರಬಂಧಕ ಉಲ್ಲಾಸ ಗುನಗಾ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
01/06/2022 10:39 pm