ಧಾರವಾಡ: ಭೂಮಿ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಲ್ಲ. ಅದು ಪ್ರತಿನಿತ್ಯದ ಪ್ರತಿಯೊಬ್ಬರ ಹೊಣೆಯಾಗಿದೆ. ಸರಳ ಜೀವನದ ಮೂಲಕ ಭೂಮಿ ಹಾಗೂ ಪರಿಸರದ ಸಮತೋಲನ, ಸಂರಕ್ಷಣೆ ಕಾಪಾಡಲು ಸಾಧ್ಯ ಎಂದು ಕರ್ನಾಟಕ ವಿಜ್ಞಾನ ಕಾಲೇಜು ಪ್ರಾಚಾರ್ಯ ಡಾ.ಎಸ್.ಸಿ.ಚೌಗಲಾ ಹೇಳಿದರು.
ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ, ವಾರ್ತಾ ಇಲಾಖೆ ಸಹಯೋಗದಲ್ಲಿ ಧಾರವಾಡದ ಸಪ್ತಾಪುರದ ದಿ.ಕ್ಲಾಸಿಕ್ ಕೆಎಎಸ್ ಮತ್ತು ಐಎಎಸ್ ಸ್ಟಡಿ ಸರ್ಕಲ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಭೂಮಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಭೂಮಿ ದಿನ ಒಂದು ದಿನಕ್ಕೆ ಸೀಮಿತವಲ್ಲ. ಇದು ನಿತ್ಯದ ಹೊಣೆಗಾರಿಕೆ. ಭೂಮಿಯ ಸಂಪನ್ಮೂಲಗಳನ್ನು ನಾವು ಮಿತವಾಗಿ ಪಡೆಯಬೇಕು, ದುರಾಸೆ ಪಡಬಾರದು. ಭೂಮಿಯನ್ನು ಕಾಪಾಡದಿದ್ದರೆ ಸಂಕಷ್ಟಕ್ಕೆ ನಾವೇ ಅಹ್ವಾನ ನೀಡಿದಂತಾಗುತ್ತದೆ. ಸಕಲ ಪ್ರಾಣಿ, ಸಸ್ಯವರ್ಗದ ಸರಪಳಿಯ ಭಾಗವಾಗಿ ಮಾನವ ಇದ್ದಾನೆ. ಗಾಂಧೀ ಮಾರ್ಗದ ಸರಳ ಬದುಕಿನ ಮೂಲಕ ಪರಿಸರ ಸಂರಕ್ಷಣೆ ಸಾಧ್ಯ. ವಿದ್ಯಾರ್ಥಿಗಳು ಆದರ್ಶ ಕನಸುಗಳು, ಪ್ರಯತ್ನದೊಂದಿಗೆ ಗುರಿ ತಲುಪಬೇಕು ಎಂದರು.
ಹುಬ್ಬಳ್ಳಿ ಧಾರವಾಡ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಮಾತನಾಡಿ, ಭೂಮಿ ಸಕಲ ಜೀವರಾಶಿಗೆ ಜೀವನಾಧಾರವಾಗಿದೆ. ಅದರ ಮೇಲಿನ ಒತ್ತಡ, ಸಮತೋಲನದ ನಿರ್ವಹಣೆ ಭೂಮಿಯ ಮೇಲಿನ ಪ್ರತಿಯೊಬ್ಬ ಮನುಷ್ಯನ ಜವಾಬ್ದಾರಿಯಾಗಿದೆ. ಪರಿಸರ ಮಾಲಿನ್ಯ ನಿಯಂತ್ರಿಸಲು ಯುವ ವಿದ್ಯಾರ್ಥಿ ಸಮೂಹ ಪಣತೊಡಬೇಕು. ಪ್ಲಾಸ್ಟಿಕ್ ಬಳಕೆ ಸಾಧ್ಯವಾದಷ್ಟು ಕಡಿಮೆಗೊಳಿಸಿ, ಪ್ರತಿ 15 ಅಡಿ ಅಂತರಕ್ಕೆ ಒಂದು ಗಿಡ, ಮರ ಬೆಳೆಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಂಶೋಧಕ, ಇತಿಹಾಸ ತಜ್ಞ ಡಾ.ಎಂ.ವೈ.ಸಾವಂತ್ ಮಾತನಾಡಿ, ಪರಿಸರ ರಕ್ಷಣೆ ಎಲ್ಲರ ಹೊಣೆ, ನಾವೆಲ್ಲ ವಾಸಿಸುವ ಭೂಮಿಯ ಸಂರಕ್ಷಣೆಗೆ ಈಗಿನಿಂದಲೇ ಕಾರ್ಯೋನ್ಮುಖರಾಗಬೇಕು. ಹುಟ್ಟು ಹಬ್ಬದ ದಿನಗಳಂದು ಕೇಕ್ ಕತ್ತರಿಸುವದಕ್ಕಿಂತ ಸಸಿ ನೆಟ್ಟು, ಬೆಳೆಸುವುದು ಮೇಲು ಎಂದರು.
ಹಿರಿಯ ಭೂ ವಿಜ್ಞಾನಿ ಕೆ.ಚಂದ್ರಶೇಖರ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ ಮಾತನಾಡಿದರು. ಕರ್ನಾಟಕ ಕಾಲೇಜು ಪ್ರಾಧ್ಯಾಪಕ ಡಾ.ಜಗದೀಶ ಗುಡಗೂರ ಪ್ರಾತ್ಯಕ್ಷಿಕೆ ಮೂಲಕ ವಿಶೇಷ ಉಪನ್ಯಾಸ ನೀಡಿದರು.
Kshetra Samachara
22/04/2022 06:33 pm