ಧಾರವಾಡ: ಶಿಕ್ಷಣ, ಜ್ಞಾನ ಹಾಗೂ ಸಂವಿಧಾನದ ಮೂಲಕ ಭಾರತದಲ್ಲಿ ಸಮಾನತೆ ತಂದ ಮಹಾನ್ ಚೇತನ ಡಾ.ಬಿ.ಆರ್.ಅಂಬೇಡ್ಕರ್. ಇಂತಹ ಪ್ರತಿಭೆ ಭಾರತದಲ್ಲಿ ಜನಿಸಿದ್ದು ದೇಶದ ಭಾಗ್ಯ. ಶಿಕ್ಷಣದ ಮೂಲಕ ಎಂತಹ ಕಠಿಣ ಸವಾಲುಗಳನ್ನೂ ಕೂಡ ಎದುರಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಹೇಳಿದರು.
ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಧಾರವಾಡದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಇಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಮುನ್ನಾದಿನದ ಅಂಗವಾಗಿ ಏರ್ಪಡಿಸಿದ್ದ ವಿಚಾರಗೋಷ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಗಿನ ಕಾಲದ ಅನೇಕ ಸಂಕಷ್ಟಗಳ ನಡುವೆಯೂ ಉತ್ತಮ ವಿದ್ಯಾಭ್ಯಾಸ ಮಾಡಿ ಉನ್ನತ ಹಂತಕ್ಕೆ ಏರಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೋಲಂಬಿಯಾ ವಿವಿ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಂತಹ ಉನ್ನತ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿ ವಿದ್ವತ್ತು, ಜ್ಞಾನ ಗಳಿಸಿ ಹಗಲಿರುಳು ಕಷ್ಟಪಷ್ಟು ಭಾರತದ ಒಳಿತಿಗಾಗಿ ಸಮ ಸಮಾಜದ ನಿರ್ಮಾಣಕ್ಕೆ ಸಂವಿಧಾನದ ಮೂಲಕ ಭದ್ರ ಬುನಾದಿ ಹಾಕಿದರು. ಅವರಷ್ಟು ಜ್ಞಾನ, ವಿದ್ಯೆ ಸಂಪಾದಿಸಿ ಅದನ್ನು ಸಮಾಜದ ಶ್ರೇಯಕ್ಕೆ ವಿನಿಯೋಗಿಸಿದ ಅವರದ್ದಾಗಿದೆ. ವಿಶ್ವದ ಎಲ್ಲಾ ಸಂವಿಧಾನಗಳನ್ನು ಅಧ್ಯಯನ ಮಾಡಿ ಉತ್ತಮ ಸಂವಿಧಾನವನ್ನು ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ್ದಾರೆ. ಗುಡ್ಡ ಬಹಳ ಎತ್ತರವಿರುತ್ತದೆ ಅದು ಎಂದೂ ಬಾಗುವುದಿಲ್ಲ. ಆದರೆ ಶಿಕ್ಷಣದ ಮೂಲಕ ಎಂತಹ ಉನ್ನತ ಗುರಿಯ ಶಿಖರಕ್ಕೂ ಏರಬಹದು. ವಿದ್ಯಾರ್ಥಿಗಳು ಸವಾಲುಗಳನ್ನು ಮೆಟ್ಟಿಲಾಗಿಸಿಕೊಂಡು ಸಾಧನೆಯ ಉತ್ತುಂಗಕ್ಕೆ ಏರಬಹುದು. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ಮಾತ್ರವಲ್ಲ ಸಮಸ್ತ ಜಗತ್ತಿಗೆ ಇಂತಹ ಸಾಧನೆ ಮಾಡಿ ತೋರಿಸಿದ್ದಾರೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಕಾಲದಲ್ಲಿ ತಮ್ಮಲ್ಲಿನ ಶಿಕ್ಷಣ ಹಾಗೂ ಪ್ರತಿಭೆಯ ಮೂಲಕವೇ ಅವಕಾಶಗಳನ್ನು ಪಡೆದು ರಾಷ್ಟ್ರದ ನಾಯಕರಾದರು. ಅವರ ಕೊಡುಗೆಗಳ ಮೂಲಕ ಕಾನೂನುಗಳಿಗೆ ಶಕ್ತಿ ಬಂದಿದೆ. ಇತ್ತೀಚೆಗೆ ಬಂದ ಜೈ ಭೀಮ್ ಚಲನಚಿತ್ರ ನ್ಯಾಯಾಂಗದ ಮೂಲಕ ಶೋಷಣೆ ತಡೆಯಲು ಸಾಧ್ಯ ಎಂಬುದನ್ನು ಮನೋಜ್ಞವಾಗಿ ಬಿಂಬಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರ ಜಾಗೃತಿ ಮೂಡಿಸಲು ಜಯಂತಿ ಕಾರ್ಯಕ್ರಮ ಪೂರಕ ಎಂದರು
ಕರ್ನಾಟಕ ವಿವಿ ಪ್ರಾಧ್ಯಾಪಕರಾದ ಡಾ.ಅರವಿಂದ ಮೂಲಿಮನಿ ಮಾತನಾಡಿ, ರಾಜಪ್ರಭುತ್ವ, ವಂಶಪಾರಂಪರ್ಯ ಆಡಳಿತಕ್ಕೆ ತಡೆಯೊಡ್ಡಿ ಪ್ರಜಾಪ್ರಭುತ್ವ ಮಾದರಿ ಸರ್ಕಾರ ಬರಲು ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಕೊಡುಗೆ ಅಮೂಲ್ಯವಾದುದು. ಕೆಲವೇ ವರ್ಗಗಳಿಗೆ ಸೀಮಿತವಾಗಿದ್ದ ಮತದಾನದ ಹಕ್ಕನ್ನು ಸಾರ್ವತ್ರಿಕಗೊಳಿಸಿದ್ದು ಸಾಮಾನ್ಯ ಸಾಧನೆಯಲ್ಲ. ಸಮಸ್ತ ಭಾರತವೇ ಸೈಮನ್ ಕಮಿಷನ್‌ಗೆ ಬಹಿಷ್ಕಾರ ಹಾಕಿದ ಸಂದರ್ಭದಲ್ಲಿ ಡಾ.ಅಂಬೇಡ್ಕರ್ ಅವರು ಆಯೋಗಕ್ಕೆ ಭೇಟಿ ನೀಡಿ ಭಾರತಕ್ಕೆ ಅಗತ್ಯವಿರುವ ಪ್ರಜಾಪ್ರಭುತ್ವ ಸ್ಥಾಪನೆಯ ಅಂಶಗಳ ಬೀಜ ಬಿತ್ತಿದರು. ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳ ಮೂಲಕ ದೇಶದಲ್ಲಿ ಸಾಮರಸ್ಯ ಸ್ಥಾಪನೆ ಸಾಧ್ಯವಿದೆ .ಕೆನಡಾ ಸರ್ಕಾರವು ಡಾ.ಅಂಬೇಡ್ಕರ್ ಜಯಂತಿದಿನವಾದ ಏ.14 ನ್ನು ಸಮಾನತೆ ದಿನವನ್ನಾಗಿ ಘೋಷಿಸಿರುವುದು ಭಾರತಕ್ಕೆ ಸಂದ ಗೌರವವಾಗಿದೆ ಎಂದರು.
Kshetra Samachara
13/04/2022 09:02 pm