ಧಾರವಾಡ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂದ್ರೆ ಸಂಗೀತ, ಕ್ರೀಡೆ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿ ಮಹಿಳಾ ದಿನಾಚರಣೆ ಆಚರಿಸುವುದುಂಟು ಆದರೆ, ಧಾರವಾಡದ ಶ್ರೀಸಾಯಿ ಪದವಿಪೂರ್ವ ವಿಜ್ಞಾನ, ವಾಣಿಜ್ಯ ಕಾಲೇಜು ಹಾಗೂ ಹೊಂಬೆಳಕು ಪ್ರತಿಷ್ಠಾನ ಅರ್ಥಪೂರ್ಣವಾಗಿ ಮಹಿಳಾ ದಿನಾಚರಣೆ ಆಚರಿಸಿದೆ.
ಹೌದು! ಧಾರವಾಡದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರ ಪತ್ನಿಯರನ್ನು ಸನ್ಮಾನಿಸಿ, ಗೌರವಿಸುವ ಮೂಲಕ ಮಹಿಳಾ ದಿನಾಚರಣೆಗೆ ನಿಜವಾದ ಅರ್ಥ ಕಲ್ಪಿಸಿಕೊಟ್ಟಿದೆ.
ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಮಹಿಳಾ ಸಮ್ಮಿಲನ ಮತ್ತು ಸಾಂಸ್ಕೃತಿಕ ಸಂಭ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು. ಅಲ್ಲದೇ ಹುತಾತ್ಮ ಯೋಧರ ಪತ್ನಿಯರು ಹಾಗೂ ನೊಂದ ಮಹಿಳೆಯರಿಗಾಗಿ ಆಪ್ತಸಖಿ ಎಂಬ ಕೇಂದ್ರವನ್ನೂ ತೆರೆಯುವ ಮೂಲಕ ಶ್ರೀಸಾಯಿ ಕಾಲೇಜು ಸಾಮಾಜಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಮಣಿಗಳನ್ನೂ ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ರೇಣುಕಾ ನಾತಾಜಿ ಪಡಥರೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೆಶಕರಾದ ಡಾ.ಶ್ರೀಮತಿ ವೀಣಾ ಬಿರಾದಾರ ಅವರು ವಹಿಸಿದ್ದರು. ಮಹಿಳಾ ಸಬಲೀಕರಣ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಶ್ರೀಮತಿ ಜಯಶೀಲಾ ಬಿ ಬೆಳಲದವರ, ಜಾನಪದ ಮತ್ತು ಲಲಿತ ಕಲಾ ಕ್ಷೇತ್ರದಲ್ಲಿ ಶ್ರೀಮತಿ ಪಾರ್ವತೆವ್ವ ಸಿದ್ದಪ್ಪ ಹೊಂಗಲ್, ಕ್ರೀಡಾ ಕ್ಷೇತ್ರದಲ್ಲಿ ಶ್ರೀಮತಿ ರೇಣುಕಾ ನಾತಾಜಿ ಪಡಥರೆ ಅವರನ್ನು ಸನ್ಮಾನಿಸಲಾಯಿತು.
ಸಾಂಸ್ಕೃತಿಕ ಸಂಭ್ರಮದಲ್ಲಿ ವಿವಿಧ ಮಹಿಳಾ ಮಂಡಳಿಗಳು ಜಾನಪದ ನೃತ್ಯ, ಜಾನಪದ ಗೀತ ಗಾಯನ ಹಾಗೂ ಮಹಿಳಾ ವಿಚಾರಗೋಷ್ಠಿ ಸ್ಪರ್ಧೆಗಳಲ್ಲಿ ಭಾಗವಸಿದ್ದವು. ಜಾನಪದ ನೃತ್ಯ ಸ್ಪರ್ಧೆಯಲ್ಲಿ ರಂಜಿನಿ ತಂಡ ಪ್ರಥಮ, ಆದಿಶಕ್ತಿ ದ್ವಿತೀಯ, ಅನುಗ್ರಹ ತಂಡ ತೃತೀಯ ಸ್ಥಾನ ಪಡೆದುಕೊಂಡವು. ಜಾನಪದ ಗೀತಗಾಯನ ಸ್ಪರ್ಧೆಯಲ್ಲಿ ಸ್ನೆಹ ಬಳಗ ತಂಡ ಪ್ರಥಮ, ಶ್ರೀ ಸೌಂದರ್ಯ ಲಹರಿ ಭಜನಾ ಮಂಡಳಿ ದ್ವಿತೀಯ, ಸಿಸಾ ವೇದಿಕೆ ತೃತೀಯ ಸ್ಥಾನ ಪಡೆದುಕೊಂಡವು ವಿಚಾರಗೋಷ್ಠಿ ಸ್ಪರ್ಧೆಯಲ್ಲಿ ಮೀನಾಕ್ಷಿ ಸೂಡಿ ಪ್ರಥಮ ಸ್ಥಾನವನ್ನು, ರೇಖಾ ಜೋಶಿ ದ್ವಿತೀಯ ಸ್ಥಾನ ಹಾಗೂ ಶಿಲ್ಪಾ ಕರಡ್ಡಿ ತೃತೀಯ ಸ್ಥಾನವನ್ನು ಪಡೆದುಕೊಂಡರು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವೇದಿಕೆಯಲ್ಲಿ ಸಮಾರೋಪ ಸಮಾರಂಭದ ಮುಖ್ಯ ಅಥಿತಿಗಳಾದ ಹಂಸವೇಣಿ ಎನ್, ಶ್ರೀಮತಿ ಚಿನ್ಮಯಿ ಎಮ್. ಪಾಟೀಲ, ಡಾ. ಶ್ರೀಮತಿ ಶಿಲ್ಪಾ ದಾನಪ್ಪನವರ, ಶ್ರೀಮತಿ ಪ್ರತಿಭಾ ಪಾಟೀಲ, ಶ್ರೀಮತಿ ನಾಗರತ್ನ ಹಡಗಲಿ, ಸಂಸ್ಥೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೆಶಕರಾದ ಡಾ. ಶ್ರೀಮತಿ ವೀಣಾ ಬಿರಾದಾರ, ಪ್ರಾಚಾರ್ಯರಾದ ಶ್ರೀ. ನಾಗರಾಜ ಶಿರೂರ ಪಾಲ್ಗೊಂಡಿದ್ದರು.
Kshetra Samachara
07/03/2022 06:10 pm