ಧಾರವಾಡ: ಕಳೆದ ಎರಡು ವರ್ಷಗಳಿಂದ ಬಹುತೇಕ ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿ ಕೋವಿಡ್ ರೋಗವನ್ನು ಕಟ್ಟಿ ಹಾಕಿ, ನಿಯಂತ್ರಿಸಲು ಧಾರವಾಡ ಜಿಲ್ಲಾಡಳಿತವು ಪರಿಣಾಮಕಾರಿ ಕ್ರಮಗಳನ್ನು ಮತ್ತು ಮುನ್ನೆಚ್ಚರಿಕೆ ವಹಿಸುವ ಮೂಲಕ ಕೋವಿಡ್ ಕಷ್ಟದ ಕಾಲವನ್ನು ಉತ್ತಮವಾಗಿ ನಿರ್ವಹಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಹೇಳಿದರು.
ಅವರು ಇಂದು ಬೆಳಿಗ್ಗೆ ಧಾರವಾಡ ಜಿಲ್ಲಾಡಳಿತ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಧಾರವಾಡ ಜಿಲ್ಲಾ ಘಟಕವು ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಆಯೋಜಿಸಿದ್ದ, ಕೋವಿಡ್‌ನಿಂದಾಗಿ ಮೃತರಾದ ಬಡ ಕುಟುಂಬದ 30 ಜನ ಮಹಿಳಾ ಸದಸ್ಯರಿಗೆ, ಸ್ವಯಂ ಉದ್ಯೋಗ ಕೈಗೊಳ್ಳಲು ಉಚಿತವಾಗಿ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ದೇಶದ ಮತ್ತು ರಾಜ್ಯದ ಜನತೆ ಅನೇಕ ತೊಂದರೆ, ಸಂಕಷ್ಟಗಳನ್ನು ಅನುಭವಿಸಿದ್ದಾರೆ. ಧಾರವಾಡ ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಮುತುವರ್ಜಿ ವಹಿಸಿದೆ. ಜಿಲ್ಲೆಯ ಅಧಿಕಾರಿಗಳು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ಸಮರ್ಥ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಉತ್ತಮ ರೀತಿಯಿಂದ ಕಾರ್ಯ ನಿರ್ವಹಿಸಿದ್ದಾರೆ.
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸುತ್ತಲಿನ ಜಿಲ್ಲೆಗಳು ಸೇರಿ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳು ಧಾರವಾಡ ಜಿಲ್ಲೆಯ ಆರೋಗ್ಯ ಸೇವೆ ಮೇಲೆ ಅವಲಂಬನೆಯಾಗಿದ್ದವು. ಉತ್ತಮ ಚಿಕಿತ್ಸೆ ನೀಡುವ ಮೂಲಕ ಲಕ್ಷಾಂತರ ಜನರ ಜೀವವನ್ನು ಕೋವಿಡ್ ಮಹಾಮಾರಿಯಿಂದ ಧಾರವಾಡ ಜಿಲ್ಲಾಡಳಿತ ಕಾಪಾಡಿದೆ ಎಂದರು.
ರೆಡ್ ಕ್ರಾಸ್ ಸಂಸ್ಥೆ ಜಾಗತಿಕ ಸೇವಾ ಸಂಸ್ಥೆ. ಮಹಾಯುದ್ಧ, ಅತಿವೃಷ್ಟಿ, ಭೂಕಂಪ, ಅನಾವೃಷ್ಟಿ ಸಂದರ್ಭದಲ್ಲಿ ಅತ್ಯುನ್ನತ ಸೇವೆಯನ್ನು ರೆಡ್ ಕ್ರಾಸ್ ಸಂಸ್ಥೆಯು ನೀಡಿದೆ. ಕೋವಿಡ್ ನಿಂದ ಹಾನಿಗೊಳಾದ ಬಡ ಕುಟುಂಬಕ್ಕೆ ಹೊಲಿಗೆ ಯಂತ್ರ ನೀಡುತ್ತಿರುವುದು ಅತ್ಯಂತ ಸಮಂಜಸ ಮತ್ತು ಉಪಯುಕ್ತವಾಗಿದೆ ಎಂದು ಅವರು ತಿಳಿಸಿದರು.
ರೆಡ್ ಕ್ರಾಸ್ ಸಂಸ್ಥೆಯ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಮಾತನಾಡಿ, ಕೋವಿಡ್‌ನಿಂದ ಕುಟುಂಬ ಸದಸ್ಯರನ್ನು ಕಳೆದಕೊಂಡ ಕುಟುಂಬಕ್ಕೆ ಭಾರತ ಸರ್ಕಾರದಿಂದ 50 ಸಾವಿರ ಆರ್ಥಿಕ ನೆರವನ್ನು ಈಗಾಗಲೇ ಜಮೆ ಮಾಡಲಾಗಿದೆ ಮತ್ತು ಅಂತಹ ಬಿ.ಪಿ.ಎಲ್. ಕುಟುಂಬಗಳಿಗೆ ಶೀಘ್ರದಲ್ಲಿ ಕರ್ನಾಟಕ ಸರಕಾರದಿಂದ 1 ಲಕ್ಷ ಆರ್ಥಿಕ ನೆರವು ನೀಡಲಾಗುವುದು ಎಂದು ತಿಳಿಸಿದರು.
ರೆಡ್ ಕ್ರಾಸ್ ಸಂಸ್ಥೆ ಕೋವಿಡ್ ಸಮಯದಲ್ಲಿ ಉತ್ತಮವಾದ ಸೇವೆ ನೀಡಿದೆ. ಕೋವಿಡ್‌ದಿಂದಾಗಿ ಮರಣ ಹೊಂದಿದ ವ್ಯಕ್ತಿಯ ಬಡ ಕುಟುಂಬಕ್ಕೆ ನೆರವಾಗಲು ಮತ್ತು ಆ ಕುಡುಂಬ ಆರ್ಥಿಕ ಸ್ವಾವಲಂಬನೆ ಸಾಧಿಸಲು ಅನುಕೂಲವಾಗುವ ಉದ್ದೇಶದಿಂದ, ನೆರವಿನ ಅಗತ್ಯವಿರುವ ಸುಮಾರು 30 ಜನ ಮಹಿಳೆಯರಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಗಿದೆ.
ಜಿಲ್ಲಾಡಳಿತದಿಂದ ಹೊಲಿಗೆ ಯಂತ್ರದ ತರಬೇತಿ ಸಹ ನೀಡಲಾಗುತ್ತದೆ. ಇದನ್ನು ಬಳಸಿಕೊಂಡು ಸ್ವಯಂ ಉದ್ಯೋಗ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಕೋವಿಡ್‌ನಿಂದಾಗಿ ಜಿಲ್ಲೆಯಲ್ಲಿ ಮರಣ ಹೊಂದಿರುವ ಸುಮಾರು 1089 ಜನರ ಡಾಟಾ ಎಂಟ್ರಿ ಆಗಿದೆ. ಇದರಲ್ಲಿ ಸುಮಾರು 467 ಜನ ಬಿಪಿಎಲ್ ಹಾಗೂ 625 ಜನ ಎಪಿಎಲ್ ಕುಟುಂಬಕ್ಕೆ ಸೇರಿದವರಾಗಿದ್ದಾರೆ.
ರೆಡ್ ಕ್ರಾಸ್ ಸಂಸ್ಥೆಯ ಧಾರವಾಡ ಜಿಲ್ಲಾ ಘಟಕದ ಚೇರಮನ್ ಡಾ.ಕವನ ದೇಶಪಾಂಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
Kshetra Samachara
16/12/2021 10:01 pm