ಇಂದಿನ ಆಧುನಿಕ ಕಾಲಘಟ್ಟದ ನಡುವೆಯೂ ಇಲ್ಲೊಂದು ಕುಟುಂಬ ಕಳೆದ 35 ವರ್ಷಗಳಿಂದಲೂ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ನಿರ್ಮಿಸುತ್ತಿದೆ!
ಹೌದು... ಹೀಗೆ ಸಾಲು ಸಾಲು ಬಣ್ಣ ರಹಿತವಾದ ಸೀಮಿತ ಬೆನಕನ ಮೂರ್ತಿಗಳನ್ನು ತಯಾರಿಸಿ ತಮ್ಮ ಮೂರ್ತಿ ನಿರ್ಮಾಣ ಪರಂಪರೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ ಕುಂದಗೋಳ ಪಟ್ಟಣದ ಕಾಂತಪ್ಪ ಬಡಿಗೇರ್ ಮತ್ತವರ ಕುಟುಂಬ.
ಮಲೆನಾಡು ಪ್ರದೇಶದಿಂದ ಮಣ್ಣು ಖರೀದಿಸಿ ತಂದು ಮೂರ್ತಿ ತಯಾರಿಕೆಗೆ ಆಗುವಷ್ಟು ಮಣ್ಣನ್ನು ಹದ ಮಾಡಿ ನಾನಾ ಭಂಗಿಯಲ್ಲಿ ಮೂರ್ತಿ ನಿರ್ಮಿಸುವ ಕಾಂತಪ್ಪ ಅವರು, ಕುಂದಗೋಳ ತಾಲೂಕಿನ ಕೆಲ ರೈತಾಪಿ ಕುಟುಂಬಗಳಿಗೆ ಪ್ರತಿವರ್ಷ ಗಣೇಶನ ಮೂರ್ತಿ ನೀಡುತ್ತಾ ಬರುತ್ತಿದ್ದಾರೆ. ಈ ವರ್ಷ 250ಕ್ಕೂ ಅಧಿಕ ಗಣಪನ ಮೂರ್ತಿ ತಯಾರಿಸಿದ ಕಾಂತಪ್ಪ ಬಡಿಗೇರ್ ಕುಟುಂಬ, ಬಣ್ಣದ ಗಣೇಶ ಮೂರ್ತಿ ಬೇಕೆಂದು ಕೇಳಿದವರಿಗೆ ಮಾತ್ರ ಬಣ್ಣ ಹಾಕಿ ಕೊಡುತ್ತಾರೆ.
ಮೂಲತಃ ಬಡಗಿ ವೃತ್ತಿ ಮುನ್ನಡೆಸಿಕೊಂಡು ಬಂದಿರುವ ಕಾಂತಪ್ಪ ಬಡಿಗೇರ್ ಹಾಗೂ ಮಕ್ಕಳು ವರ್ಷದ 2 ತಿಂಗಳು ಮಾತ್ರ ವಿನಾಯಕನ ಮೂರ್ತಿ ತಯಾರಿಕೆಯಲ್ಲಿ ನಿರತರಾಗುತ್ತಾರೆ. ಗಣೇಶನ ಮೂರ್ತಿಯಲ್ಲದೆ, ಇನ್ನಿತರ ಮೂರ್ತಿ- ಆಕೃತಿ ತಯಾರಿಯಲ್ಲಿಯೂ ಇವರದು ಎತ್ತಿದ ಕೈ. 2 ಅಡಿ ಉದ್ದದ ಚಕ್ಕಡಿ- ಜೋಡೆತ್ತು, ರೈತ ಹಾಗೂ ರೈತ ಮಹಿಳೆಯರ ಕಲಾಕೃತಿಗಳನ್ನು ಕಟ್ಟಿಗೆಯಲ್ಲಿ ಮಾಡಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.
- ಪಬ್ಲಿಕ್ ನೆಕ್ಸ್ಟ್ ವಿಶೇಷ: ಶ್ರೀಧರ ಪೂಜಾರ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
10/08/2022 06:09 pm