ಧಾರವಾಡ: ಧಾರವಾಡದ ರಾಷ್ಟೀಯ ಹೆದ್ದಾರಿಯಲ್ಲಿರುವ ಮುಮ್ಮಿಗಟ್ಟಿ ಬಳಿ ಇತ್ತೀಚೆಗೆ ರಾಸಾಯನಿಕ ತುಂಬಿಕೊಂಡು ಹೊರಟಿದ್ದ ಲಾರಿ ಪಲ್ಟಿಯಾಗಿತ್ತು. ಟ್ಯಾಂಕರ್‌ನಲ್ಲಿನ ರಾಸಾಯನಿಕ ಚರಂಡಿ ಸೇರಿ, ಅದು ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ಹಿರೇಕೆರೆ ಸೇರಿದ್ದು, ಇದೀಗ ಕೆರೆಯಲ್ಲಿನ ಮೀನುಗಳು ಸತ್ತು ಕೆರೆ ದಂಡೆಗೆ ಬಂದು ಬೀಳುತ್ತಿವೆ.
ಕಳೆದ ನಾಲ್ಕೈದು ದಿನಗಳ ಹಿಂದೆ ಮುಮ್ಮಿಗಟ್ಟಿ ಬಳಿ ಈ ರಾಸಾಯನಿಕ ತುಂಬಿದ್ದ ಟ್ಯಾಂಕರ್ ವಾಹನ ಪಲ್ಟಿಯಾಗಿತ್ತು. ಚಾಲಕ ಸೇರಿದಂತೆ ಅದರಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ, ಟ್ಯಾಂಕರ್‌ನಲ್ಲಿದ್ದ ರಾಸಾಯನಿಕ ಸೋರಿಕೆಯಾಗಿದ್ದರ ಬಗ್ಗೆ ಯಾರೊಬ್ಬರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ನಿರಂತರವಾಗಿ ಸುರಿದ ಮಳೆಯಿಂದಾಗಿ ರಾಸಾಯನಿಕ ಚರಂಡಿ ಮೂಲಕ ನರೇಂದ್ರ ಗ್ರಾಮದ ಹಿರೇಕೆರೆ ಸೇರಿದೆ. ಇದರಿಂದಾಗಿ ಕೆರೆಯಲ್ಲಿರುವ ಮೀನು ಸೇರಿದಂತೆ ಇತರ ಜಲಚರ ಜೀವಿಗಳು ಸತ್ತು ದಡ ಸೇರುತ್ತಿವೆ.
ನರೇಂದ್ರ ಗ್ರಾಮದ ಈ ಕೆರೆ ಸುಮಾರು 85 ಎಕರೆ ವಿಸ್ತೀರ್ಣದಲ್ಲಿದೆ. ಹೀಗಿರುವಾಗ ಕೆರೆಯಿಂದ ದುರ್ವಾಸನೆ ಬರುತ್ತಿರುವ ಕುರಿತು ಮತ್ತು ಮೀನುಗಳು ಸತ್ತು ಕೆರೆ ದಂಡೆಗೆ ಬಂದು ಬೀಳುತ್ತಿರುವ ಕುರಿತು ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಗಮನಸೆಳೆದಿದ್ದಾರೆ. ಈ ಕುರಿತು ಪಿಡಿಓ ಕೂಡ ಸಭೆ ನಡೆಸಿದ್ದಾರೆ. ಅಲ್ಲದೇ ಅಧ್ಯಕ್ಷರು ಮತ್ತು ಸದಸ್ಯರು ಈ ಕೆರೆ ನೀರನ್ನು ಬಳಕೆ ಮಾಡದಂತೆ ಗ್ರಾಮದಲ್ಲಿ ಎಚ್ಚರಿಕೆ ನೀಡಿದ್ದಾರೆ. ಗ್ರಾಮದಲ್ಲಿ ಈ ಸಂಬಂಧ ಡಂಗುರ ಸಹ ಸಾರಲಾಗಿದೆ.
ಈ ಕೆರೆಯ ನೀರಿನ ಮಾದರಿಯನ್ನು ಪರೀಕ್ಷೆಗಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಳುಹಿಸಲಾಗಿದೆ. ಈ ವರದಿ ಬಂದ ನಂತರವೇ ನೀರನ್ನು ಬಳಕೆ ಮಾಡುವಂತೆ ಜಾಗೃತಿ ಮೂಡಿಸಲು ಇದೀಗ ಗ್ರಾಮ ಪಂಚಾಯ್ತಿ ಮುಂದಾಗಿದೆ.
Kshetra Samachara
19/07/2022 07:00 pm