ಧಾರವಾಡ: ಧಾರವಾಡದ ಎಮ್ಮೆ ತಳಿಗೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ ರಾಷ್ಟ್ರಮಟ್ಟದ ಮಾನ್ಯತೆ ನೀಡಿದೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸಂಶೋಧಕರು ಸಂಶೋಧನೆ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ನೀಡಿದ್ದರು. ಇದನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು. ಅದರಂತೆ ಉತ್ತರ ಕರ್ನಾಟಕದ ಸ್ಥಳೀಯ ಎಮ್ಮೆ ತಳಿಗೆ ರಾಷ್ಟ್ರಮಟ್ಟದ ಮಾನ್ಯತೆ ದೊರೆತಿದೆ.
ದೇಶದ 18ನೇ ತಳಿಯಾಗಿ ಧಾರವಾಡ ಎಮ್ಮೆಯನ್ನು ಘೋಷಣೆ ಮಾಡಲಾಗಿದೆ. ಹರಿಯಾಣದ ಪಶು ಆನುವಂಶಿಕ ಸಂಶೋಧನಾ ಬ್ಯೂರೋದಿಂದ INDIA BUFFALO 0800 DHARWADI 01018 ಎಂದು ನೋಂದಣಿ ಸಂಖ್ಯೆ ನೀಡಲಾಗಿದೆ. ಈ ನೋಂದಣಿ ಸಂಖ್ಯೆಯಿಂದ ವಿಶ್ವಮಟ್ಟದಲ್ಲಿ ಎಮ್ಮೆ ಗುರುತಿಸಿಕೊಳ್ಳುವಂತಾಗಿದೆ. ದೇಶಿ ತಳಿ ಮಾನ್ಯತೆ ಪಡೆದ ರಾಜ್ಯದ ಮೊದಲ ಎಮ್ಮೆ ಎಂಬ ಹೆಗ್ಗಳಿಕೆ ಪಡೆದಿದೆ. ಧಾರವಾಡ ಎಮ್ಮೆಗೆ ಈ ಮಾನ್ಯತೆ ದೊರಕಿಸಿಕೊಡುವಲ್ಲಿ ಕೃಷಿ ವಿಶ್ವ ವಿದ್ಯಾಲಯದ ಪಶು ವಿಜ್ಞಾನ ವಿಭಾಗದ ಪಾತ್ರವಿದೆ. 2014 ರಿಂದ 2017ರವರೆಗೆ ಈ ಕುರಿತು ಸಂಶೋಧನೆ ಮಾಡಿ ಅಂತಿಮ ವರದಿ ಸಲ್ಲಿಕೆ ಮಾಡಲಾಗಿತ್ತು. ಅದಕ್ಕೆ ಕೊನೆಗೂ ಮಾನ್ಯತೆ ದೊರೆತಿದೆ.
Kshetra Samachara
09/09/2021 01:57 pm