ಧಾರವಾಡ: ಇತ್ತೀಚೆಗೆ ಸುರಿದ ಮಳೆ ಉತ್ತರ ಕರ್ನಾಟಕ ಭಾಗದ ರೈತರನ್ನೆಲ್ಲ ಹೈರಾಣು ಮಾಡಿ ಹಾಕಿದೆ. ಸದ್ಯ ಮಳೆ ನಿಂತಿದೆಯಾದರೂ ಮಳೆಯಿಂದ ಆಗಿರುವ ಹಾನಿಗಳು ಮಾತ್ರ ಒಂದೊಂದಾಗಿ ಬೆಳಕಿಗೆ ಬರುತ್ತಲೇ ಇವೆ. ಧಾರವಾಡ ಜಿಲ್ಲೆಯಲ್ಲಿ ರೈತರಂತೆಯೇ ಮೀನುಗಾರರು ಸಹ ಮಳೆಯಿಂದ ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಸಮುದ್ರ ಇಲ್ಲ. ನದಿಯಂತೂ ಇಲ್ಲವೇ ಇಲ್ಲ. ಆದರೂ ಜಿಲ್ಲೆಯಲ್ಲಿ ಮೀನುಗಾರಿಕೆ ತುಂಬಾ ಸಕ್ರೀಯವಾಗಿದೆ. ಯಾಕಂದ್ರೆ ಜಿಲ್ಲೆಯಲ್ಲಿ ಸಾಕಷ್ಟು ದೊಡ್ಡ ದೊಡ್ಡ ಕೆರೆಗಳಿದ್ದು, ಆ ಪೈಕಿ, ಮೀನುಗಾರಿಕೆ ಇಲಾಖೆಯ ಅಡಿಯಲ್ಲಿ ಜಿಲ್ಲೆಯಲ್ಲಿ 128 ಕೆರೆಗಳಲ್ಲಿ ಒಳನಾಡು ಮೀನುಗಾರಿಕೆ ನಡೆಯುತ್ತಿದ್ದು, ಅಲ್ಲಲ್ಲಿ ಮೀನುಗಾರರ ಸಂಘಗಳು ತುಂಬಾ ಕ್ರಿಯಾತ್ಮಕವಾಗಿ ಕೆಲಸ ಮಾಡುತ್ತಿವೆ. ಪ್ರತಿ ವರ್ಷದಂತೆ ಈ ಸಲವೂ ಇತ್ತೀಚೆಗೆ ಸುಮಾರು 8 ಲಕ್ಷದಷ್ಟು ಮೀನು ಮರಿಗಳನ್ನು ಆಯಾ ಕೆರೆಗಳಿಗೆ ಬಿಟ್ಟಿದ್ದರು. ಆದರೆ, ಅದಾದ ಕೆಲವೇ ದಿನಕ್ಕೆ ಮಳೆ ಜೋರು ಪಡೆದು, ಕೆರೆಗಳೆಲ್ಲ ತುಂಬಿ ಕೋಡಿ ಬಿದ್ದು, ನೀರು ಹರಿದು ಹೋಗಿದ್ದರಿಂದ ಸಾಕಷ್ಟು ಮೀನು ಮರಿಗಳೆಲ್ಲವೂ ಆ ನೀರಿನೊಂದಿಗೆ ಹರಿದು ಹೋಗಿವೆ.
ಮೀನು ಮರಿಗಳನ್ನು ಬಿಟ್ಟ ಮೂರ್ನಾಲ್ಕು ದಿನದ ಬಳಿಕ ಮಳೆ ಹೆಚ್ಚಾಗಿ ಕೆರೆಗಳು ಕೋಡಿ ಬಿದ್ದರೇ ಮರಿಗಳು ಹೊರಗೆ ಬರೋದಿಲ್ಲ. ಕೆರೆಗಳಲ್ಲಿ ಅವು ಪ್ರಶಸ್ಥ ಸ್ಥಳ ಹಿಡಿದುಕೊಂಡಿರುತ್ತವೆ ಅಂತಾ ಇಲಾಖೆ ಅಧಿಕಾರಿಗಳೇನೋ ಹೇಳುತ್ತಿದ್ದಾರೆ. ಆದ್ರೆ ಎಷ್ಟೋ ಕೆರೆಗಳಲ್ಲಿ ಮರಿ ಬಿಟ್ಟ ಮರುದಿನವೇ ಕೆರೆಗಳು ಕೋಡಿಗಳು ಬಿದ್ದಿವೆ. ಅಂತಹ ಕೆರೆಯಲ್ಲಿ ಮೀನು ಕೃಷಿ ಮಾಡುತ್ತಿರುವವರು ಈಗ ಆತಂಕ ಎದುರಿಸುವಂತಾಗಿದೆ. ಅದರಲ್ಲಿಯೂ ತುಂಬಾ ಚೆನ್ನಾಗಿ ಕಾರ್ಯನಿರ್ವಹಿಸುವ ಮುಗದ ಕೆರೆಯ ಮೀನುಗಾರರು ತಮ್ಮ ಕೆರೆಯಲ್ಲಿ ಇಲಾಖೆ ಸಹಯೋಗದ ಜೊತೆಗೆ ತಾವು ಸ್ವಂತವಾಗಿ ಒಂದಷ್ಟು ಮೀನು ಮರಿಗಳನ್ನು ತಂದು ಬಿಟ್ಟಿದ್ದರು. ಆದ್ರೆ ಮರುದಿನವೇ ಕೆರೆ ಕೋಡಿ ಬಿದ್ದಿದೆ. ಇದರಿಂದಾಗಿ ಈಗ ಲಕ್ಷಾಂತರ ರೂಪಾಯಿ ಹಾನಿಯಾಗಿದ್ದು, ನಮಗೂ ವಿಮಾ ಸೌಲಭ್ಯ ಒದಗಿಸಿಕೊಡಬೇಕು ಎಂದು ಮೀನುಗಾರರು ಕೇಳುತ್ತಿದ್ದಾರೆ.
ಒಟ್ಟಾರೆಯಾಗಿ ಇತ್ತೀಚೆಗೆ ಸುರಿದ ಮಳೆ ಧಾರವಾಡ ಜಿಲ್ಲೆಯಲ್ಲಿ ಒಂದು ಕಡೆ ಅನ್ನದಾತರಿಗೆ ಸಂಕಷ್ಟ ತಂದಿಟ್ಟಿರುವ ಬೆನ್ನಲ್ಲಿಯೇ ಮೀನುಗಾರರ ಇಡೀ ವರ್ಷದ ಆದಾಯಕ್ಕೂ ಪೆಟ್ಟು ನೀಡಿದ್ದು, ಇಂಥವರಿಗೆ ಈಗ ಸರ್ಕಾರದ ಸಹಾಯ ಧನವೇ ಕೈ ಹಿಡಿಯಬೇಕಾದ ಅಗತ್ಯ ಇದೆ.
Kshetra Samachara
03/08/2021 07:59 pm