ಧಾರವಾಡ: ಸಾಲು ಮರದ ತಿಮ್ಮಕ್ಕ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಸಾಲು ಸಾಲು ಮರಗಳನ್ನು ನೆಟ್ಟು ಮರಗಳನ್ನು ಮಕ್ಕಳಂತೆ ಕಂಡ ಮಹಿಳೆ ಆಕೆ. ಇಳಿ ವಯಸ್ಸಿನಲ್ಲೂ ಪರಿಸರ ಪ್ರೇಮ ಮೆರಯುವ ಮೂಲಕ ಸಾರ್ಥಕತೆ ಕಂಡವಳು ತಿಮ್ಮಕ್ಕ.ಅಂತವಳ ಹೆಸರಿನಲ್ಲಿ ಧಾರವಾಡದಲ್ಲೊಂದು ಗಾರ್ಡನ್ ನಿರ್ಮಾಣಗೊಂಡು ಕೈಬೀಸಿ ಕರೆಯುತ್ತಿದೆ.
ಸಾಲು ಮರದ ತಿಮ್ಮಕ್ಕನ ಹೆಸರು ಉಳಿಯಬೇಕು ಎಂಬ ದೃಷ್ಟಿಯಿಂದ ರಾಜ್ಯ ಸರ್ಕಾರ ಕೆಲ ವರ್ಷಗಳ ಹಿಂದೆ ಆಕೆಯ ಹೆಸರಿನಲ್ಲಿ ಎಲ್ಲ ತಾಲೂಕುಗಳಲ್ಲಿ ಪಾರ್ಕ್ ನಿರ್ಮಾಣಕ್ಕೆ ಸೂಚನೆ ನೀಡಿತ್ತು. ಅದರಂತೆ ಧಾರವಾಡದಲ್ಲಿ ಆಕೆಯ ಹೆಸರಿನಲ್ಲಿ ಅದ್ಭುತ ಪಾರ್ಕ್ ತಲೆ ಎತ್ತಿದೆ. ಧಾರವಾಡ ನಗರದ ನವಲೂರು ಬಡಾವಣೆಯ ಹಿಂಭಾಗದಲ್ಲಿರುವ ಅರಣ್ಯ ಇಲಾಖೆಯ ಜಾಗೆಯಲ್ಲಿ ಈ ಪಾರ್ಕ್ ನಿರ್ಮಾಣವಾಗುತ್ತಿದೆ. ಸುಮಾರು 57 ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಸಾಕಷ್ಟು ಗಿಡಗಳು ಬೆಳೆದು ನಿಂತಿವೆ. ಕಣ್ಣು ಹಾಯಿಸಿದಷ್ಟು ದೂರಕ್ಕೆ ಹಸಿರೇ ಹಸಿರು ಕಾಣುತ್ತಿದೆ.
ಈ ಯೋಜನೆಯನ್ನು 2015 ರಲ್ಲಿಯೇ ಘೋಷಿಸಲಾಯಿತಾದರೂ ಹಣಕಾಸಿನ ತೊಂದರೆಯಿಂದ ಅನೇಕ ಕಡೆಗಳಲ್ಲಿ ಆರಂಭಿಸಲು ಸಾಧ್ಯವಾಗಿಲ್ಲ. ಆದರೆ ಅರಣ್ಯ ಇಲಾಖೆಯ ಜಮೀನಿನಲ್ಲಿಯೇ ಈ ಯೋಜನೆ ರೂಪಿಸಲು ಧಾರವಾಡ ವಲಯದಲ್ಲಿ ನಿರ್ಧರಿಸಲಾಯಿತು. ಅದಕ್ಕಾಗಿಯೇ ನೀಲನಕ್ಷೆ ಸಿದ್ಧಪಡಿಸಿ, ಆಗಲೇ ಯೋಜನೆಯನ್ನು ಜಾರಿ ಮಾಡಲು ಆರಂಭಿಸಲಾಯಿತು. ಸುಂದರವಾದ ಬೃಹತ್ ದ್ವಾರದ ಮೂಲಕ ಈ ಪಾರ್ಕ್ ಒಳಗಡೆ ಹೋದರೆ ಸಾಕು ಬಣ್ಣ ಬಣ್ಣದ ಹೂವುಗಳು ನಿಮ್ಮನ್ನು ಸ್ವಾಗತಿಸುತ್ತವೆ. ಇನ್ನು ಆಲ, ಅರಳಿ, ಅತ್ತಿ, ಮಾವು, ಗೋಡಂಬಿ, ಮಹಾಗನಿ, ಬೊಂಬು ಸೇರಿದಂತೆ ಅನೇಕ ಗಿಡಗಳು ನಿಮ್ಮನ್ನು ಸ್ವಾಗತಿಸುತ್ತವೆ. ಅಂದುಕೊಂಡದ್ದಕ್ಕಿಂತ ಉತ್ತಮವಾಗಿ ಗಿಡಗಳು ಬೆಳೆದಿದ್ದರಿಂದ ಪ್ರವಾಸಿಗರಿಗೂ ಈ ಪ್ರದೇಶ ಅಚ್ಚುಮೆಚ್ಚಾಗಿ ಬದಲಾಗಿದೆ. ಇನ್ನೂ ಈ ಪಾರ್ಕ್ ನಿರ್ಮಾಣ ಹಂತದಲ್ಲಿಯೇ ಇದ್ದರೂ ಜನರು ಇಲ್ಲಿಗೆ ಬರಲು ಶುರು ಮಾಡಿದ್ದಾರೆ.
ಇದೀಗ ಮಕ್ಕಳಿಗೆ ಆಟಕ್ಕಾಗಿಯೇ ಪ್ರತ್ಯೇಕ ಸ್ಥಳವನ್ನು ಮೀಸಲಾಗಿಡಲಾಗಿದೆ. ಇದರೊಂದಿಗೆ ಇಡೀ ಪಾರ್ಕ್ ನಲ್ಲಿ ಸೋಲಾರ್ ದೀಪಗಳನ್ನು ಅಳವಡಿಸಲಾಗಿದೆ. ಅಲ್ಲಲ್ಲಿ ಸಣ್ಣ ಸಣ್ಣ ಕೆರೆಗಳನ್ನು ನಿರ್ಮಿಸಲಾಗಿದ್ದು, ರಾತ್ರಿ ವೇಳೆ ಕಾಡು ಪ್ರಾಣಿಗಳಿಗೆ ಕುಡಿಯೋ ನೀರಿನ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಪಕ್ಕದಲ್ಲಿಯೇ ಇರುವ ಕೆರೆಯ ಅಭಿವೃದ್ಧಿಯನ್ನು ಕೂಡ ಇದರಲ್ಲಿಯೇ ಸೇರಿಸಿ, ಅಲ್ಲಿಯೂ ಕೂಡ ಜನರು ಭೇಟಿ ನೀಡುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಒಟ್ಟಿನಲ್ಲಿ ಗಿಡ-ಮರಗಳೆಂದರೆ ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಸುವ ಸಾಲು ಮರದ ತಿಮ್ಮಕ್ಕನ ಹೆಸರಿನಲ್ಲಿ ಇಂತದ್ದೊಂದು ಪಾರ್ಕ್ ಗಮನ ಸೆಳೆಯುತ್ತಿರುವುದು ನಿಜಕ್ಕೂ ಸಂತಸದ ಸಂಗತಿಯೇ ಸರಿ.
Kshetra Samachara
30/01/2021 10:40 am